ಧರ್ಮಸ್ಥಳ : ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ ಸುಜಾತಾ ಭಟ್ ಎಂಬ ವೃದ್ಧ ಮಹಿಳೆ ಸೃಷ್ಟಿಸಿದ ಅನನ್ಯ ಭಟ್ ಕಟ್ಟುಕತೆ ಪ್ರಹಸನದಲ್ಲಿ ದಿಢೀರ್ ಎಂದು ಖ್ಯಾತ ನಟನೊಬ್ಬನ ಸಹೋದರನ ಹೆಸರು ಪ್ರಸ್ತಾವಕ್ಕೆ ಬಂದಿರುವುದು ಕುತೂಹಲ ಮೂಡಿಸಿದೆ. ದಕ್ಷಿಣ ಭಾರತದ ಖ್ಯಾತ ನಟ, ಖಳನಾಯಕ ಹಾಗೂ ನಿರ್ದೇಶಕನ ಸಹೋದರ ಹೆಸರು ಈಗ ಧರ್ಮಸ್ಥಳ ಪ್ರಕರಣಕ್ಕೆ ತಳಕು ಹಾಕಿಕೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲೇ ಎಸ್ಐಟಿ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ. ಪ್ರಕರಣದ ತನಿಖೆಯ ವೇಳೆ ಎಸ್ಐಟಿಗೆ ಆ ನಟನ ಸಹೋದರನ ಹೆಸರು ಸಿಕ್ಕಿದ್ದು, ಅದರ ಹಿನ್ನೆಲೆಯಲ್ಲಿ ಆತನ ಚೆನ್ನೈ ವಿಳಾಸ ಪತ್ತೆಹಚ್ಚುವ ಕಾರ್ಯ ನಡೆದಿದೆ.
ಚೆನ್ನೈ ಬೀಚ್ ಪ್ರದೇಶದ ಸುತ್ತಮುತ್ತ ವಾಸವಿರುವ ಆ ನಟನ ಸಹೋದರ ಕೂಡ ನಟನಾಗಿದ್ದು, ವಿಳಾಸ ದೃಢಪಡಿಸಲು ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ವಿಳಂಬವಾಗಿರುವ ಕಾರಣ ನೋಟಿಸ್ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂಳಲಾಗಿತ್ತು ಎಂಬ ಆರೋಪ ಮುನ್ನೆಲೆಗೆ ಬರುತ್ತಿದ್ದಂತೆಯೇ ಸುಜಾತಾ ಭಟ್ ಎಂಬ ವೃದ್ಧ ಮಹಿಳೆ ಪ್ರತ್ಯಕ್ಷವಾಗಿ ತನ್ನ ಮಗಳು, ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ 2003ರಲ್ಲಿ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದಳು. ಅವಳ ಅಸ್ಥಿಪಂಜರವನ್ನಾದರೂ ಹುಡುಕಿಕೊಡಿ ಎಂದು ಎಸ್ಐಟಿಗೆ ಮನವಿ ಮಾಡಿದ್ದರು. ಬಳಿಕ ಸುಜಾತ ಭಟ್ ಆಸ್ತಿ ವಿಚಾರಕ್ಕೆ ಮಗಳ ಬಗ್ಗೆ ಕಥೆ ಕಟ್ಟಿರುವುದಾಗಿ ಒಪ್ಪಿಕೊಂಡು ವೀಡಿಯೊ ಬಿಡುಗಡೆ ಮಾಡಿದ್ದರು. ತನ್ನ ಅಜ್ಜನ ಭೂಮಿ ಮತ್ತು ಧರ್ಮಸ್ಥಳ ದೇವಾಲಯಕ್ಕೆ ಸಂಬಂಧಿಸಿದ ಆಸ್ತಿ ವಿವಾದದ ಕಾರಣಕ್ಕೆ ಹೋರಾಟಗಾರರ ಒತ್ತಡಕ್ಕೆ ಮಣಿದು ಆರೋಪ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.
ಅದಾದ ನಂತರ ಮತ್ತೆ ಯೂಟರ್ನ್ ತೆಗೆದುಕೊಂಡು, ಯೂಟ್ಯೂಬರ್ ಒಬ್ಬ ತನಗೆ ಮಗಳೇ ಇರಲಿಲ್ಲ ಎಂದು ಹೇಳುವಂತೆ ಒತ್ತಾಯಿಸಿದ್ದಾನೆ ಎಂದು ಟಿವಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡರು. ನಂತರದ ಎಸ್ಐಟಿ ವಿಚಾರಣೆಯ ಸಮಯದಲ್ಲಿ, ಆಕೆಯ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿರುವುದು ಕಂಡುಬಂತು. ನಂತರ ಸುಜಾತ ಭಟ್ ದೂರನ್ನು ಹಿಂಪಡೆಯುವುದಾಗಿ ಎಸ್ಐಟಿಗೆ ಹೇಳಿದ್ದರು. ಇದೀಗ ಅದೇ ಪ್ರಕರಣದಲ್ಲಿ ಖ್ಯಾತ ನಟನ ಸಹೋದರ ಹೆಸರು ಕೇಳಿಬಂದಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಪ್ರಕರಣದಲ್ಲಿ ಆ್ಯಂಬುಲೆನ್ಸ್ ಚಾಲಕರಾದ ಜಲೀಲ್ ಬಾಬಾ ಮತ್ತು ಹಮೀದ್ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಶನಿವಾರ ಸಂಜೆ 7.30ರವರೆಗೂ ಇವರನ್ನು ವಿಚಾರಣೆ ನಡೆಸಿದ್ದ ಎಸ್ಐಟಿ, ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳ ಶವಗಳನ್ನು ಸಾಗಿಸಿದ್ದ ಪ್ರಕರಣದ ಕುರಿತಂತೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿತ್ತು. ಈ ಇಬ್ಬರು ಚಾಲಕರಿಂದ ದೊರೆತ ಮಾಹಿತಿಯು ತನಿಖೆಗೆ ಪ್ರಮುಖ ಸುಳಿವು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.