ಧರ್ಮಸ್ಥಳ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬರೋಬ್ಬರಿ 4,000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದೆ. ನಾಲ್ಕು ತಿಂಗಳ ಕಾಲ ತನಿಖೆ ನಡೆಸಿರುವ ಪೊಲೀಸರು ಎಲ್ಲ ಅಂಶಗಳನ್ನು ಎಲ್ಲ ಆಯಾಮದಿಂದ ಪರಿಶೀಲಿಸಿದ್ದಾರೆ.
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ಎಸ್‌ಐಟಿ ಪೊಲೀಸರು ಪ್ರಕರಣದಲ್ಲಿ 6 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆಂಬ ಮಾಹಿತಿ ಇದೆ. ಬುರುಡೆ ಗ್ಯಾಂಗ್‌ನ ಪ್ರಮುಖರಾದ ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ಸುಜಾತ ಭಟ್, ವಿಠಲ್ ಗೌಡ ಮಾಡಿದ ಷಡ್ಯಂತ್ರ ಚಾರ್ಜ್‌ಶೀಟ್‌ನ ಪ್ರಮುಖ ಆರೋಪಿಗಳಾಗುವ ಸಾಧ್ಯತೆಯಿದೆ.
4,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಅನಾಮಿಕನಾಗಿ ಬಂದ ವ್ಯಕ್ತಿಯ ಹೇಳಿಕೆ, 17ಕ್ಕೂ ಹೆಚ್ಚು ಜಾಗದಲ್ಲಿ ನಡೆದ ಸಮಾಧಿ ಶೋಧ, ತನಿಖೆ ಸಂದರ್ಭದ ವಿಚಾರಣೆ, ಅನಾಮಿಕ ವ್ಯಕ್ತಿಗೆ ಸಂಬಂಧಿಸಿದಂತೆ ಆತನ ಸಂಪರ್ಕದಲ್ಲಿದ್ದವರ ವಿಚಾರಣೆ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಪೂರಕ ಸಾಕ್ಷಿಗಳು ಫೋಟೋ ವಿಡಿಯೋ ಹೇಳಿಕೆಗಳು ದೋಷಾರೋಪಣಾ ಪಟ್ಟಿಯಲ್ಲಿದೆ. ಎಲ್ಲರ ಪ್ರತ್ಯೇಕ ಹೇಳಿಕೆ ದಾಖಲು ಮಾಡಿಕೊಂಡಿರುವ ಎಸ್‌ಐಟಿ ಜೂನ್ 22ರಿಂದ ಎರಡು ತಿಂಗಳುಗಳ ಕಾಲ ನಡೆದ ದೂರು ಪ್ರಕ್ರಿಯೆ, ನಾಲ್ಕು ತಿಂಗಳ ಪೊಲೀಸರ ತನಿಖೆ ಸಂಬಂಧಿಸಿದಂತೆ ಎಲ್ಲಾ ಡಿಟೇಲ್‌ಗಳನ್ನು 4,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಜೋಡಿಸಲಾಗಿದೆ.
ಇಂದು ಚಾರ್ಜ್‌ಶೀಟ್ ಸಲ್ಲಿಕೆ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆದಿದ್ದು, ಗೃಹ ಸಚಿವ ಪರಮೇಶ್ವರ್, ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಸೇರಿದಂತೆ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿ ಆಗಿದ್ದರು.
ಪ್ರಕರಣದಲ್ಲಿ ಈಗಾಗಲೇ ಬುರುಡೆ ತಂದಿದ್ದ ಚಿನ್ನಯ್ಯ ಅರೆಸ್ಟ್ ಆಗಿದ್ದು, ಉಳಿದವರ ವಿಚಾರಣೆ ನಡೆಸಲಾಗಿದೆ. ಚಾರ್ಜ್‌ಶೀಟ್ ನಂತರ ಬುರುಡೆ ಗ್ಯಾಂಗ್‌ನ ಕಥೆ ಏನು ಎಂಬುದು ಕುತೂಹಲ ಮೂಡಿಸಿದೆ.
ಈ ನಡುವೆ ಧರ್ಮಸ್ಥಳ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹಾಗೂ ಎಸ್.ಐ.ಟಿ ತನಿಖೆಗೆ ತಡೆ ನೀಡಬೇಕು ಎಂದು ಉಜಿರೆಯ ಗಣೇಶ್ ಶೆಟ್ಟಿ ಎಂಬವರು ಹೈಕೋರ್ಟಿಗೆ ಮನವಿ ಸಲ್ಲಿಸಿದ ಬೆಳವಣಿಗೆ ನಡೆದಿದೆ. ಆದರೆ ಹೈಕೋರ್ಟ್ ಈ ಮನವಿಯನ್ನು ಪರಿಗಣಿಸಲು ನಿರಾಕರಿಸಿದೆ.
ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (ಎಫ್‌ಐಆರ್ ಸಂಖ್ಯೆ- 39/2025) ಹಾಗೂ ಎಸ್‌ಐಟಿ ತನಿಖೆ ರದ್ದು ಕೋರಿ ಉಜಿರೆ ನಿವಾಸಿ ಗಣೇಶ್ ಶೆಟ್ಟಿ (29) ಎಂಬುವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ಅರ್ಜಿ ಇತ್ಯರ್ಥವಾಗುವವರೆಗೆ ಎಫ್‌ಐಆರ್ ಮತ್ತು ಎಸ್‌ಐಟಿ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಎಸ್‌ಐಟಿ ಪರ ಹಾಜರಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಅರ್ಜಿದಾರ ಗಣೇಶ್ ಶೆಟ್ಟಿ ಅವರ ಹೆಸರು ಇಲ್ಲ. ಅವರನ್ನು ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಅಧಿಕಾರಿಗಳು ನೋಟಿಸ್ ಸಹ ನೀಡಿಲ್ಲ. ಆದರೂ ಅರ್ಜಿದಾರರು ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮೂಲತಃ ಎಫ್‌ಐಆರ್ ರದ್ದತಿಗೆ ಕೋರಲು ಅರ್ಜಿದಾರರಿಗೆ ಯಾವುದೇ ಹಕ್ಕು ಹಾಗೂ ಅವಕಾಶ ಇಲ್ಲ. ಆದ್ದರಿಂದ, ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಿ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.
ಈ ಮನವಿ ಪರಿಗಣಿಸಿದ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿತು. ಜತೆಗೆ, ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
































