ಧರ್ಮಸ್ಥಳ : ಮಾಸ್ಕ್ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆ ಪ್ರಕರಣದಲ್ಲಿ ಕೇರಳದ ಯೂಟ್ಯೂಬರ್ ಮನಾಫ್ ಎಂಬವನ ಹೆಸರು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಕೇರಳದ ಕಮ್ಯುನಿಸ್ಟ್ ಸಂಸದರೊಬ್ಬರ ಹೆಸರು ಕೇಳಿಬಂದಿದೆ. ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಎಂಬವರಿಗೆ ಬುರುಡೆ ಪ್ರಕರಣದ ಜೊತೆ ಲಿಂಕ್ ಇದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
ಬುರುಡೆ ಗ್ಯಾಂಗ್ ತಲೆಬುರುಡೆಯನ್ನು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಕೇರಳದ ಸಂಸದ ಸಂತೋಷ್ ಕುಮಾರ್ ಬಳಿಗೆ ತೆರಳಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿ ನೆರವು ಕೋರಿತ್ತು ಎಂಬ ಸ್ಫೋಟಕ ಮಾಹಿತಿ ಎಸ್ಐಟಿ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ದೊರೆತಂತಾಗಿದೆ.
ವಿಶೇಷವೆಂದರೆ ಕೆಲದಿನಗಳ ಹಿಂದೆ ಇದೇ ಸಂತೋಷ್ ಕುಮಾರ್ ಧರ್ಮಸ್ಥಳದಲ್ಲಿ ನೂರಾರು ಕೊಲೆಗಳಾಗಿರುವ ಆರೋಪ ಕಳವಳಕಾರಿಯಾಗಿದ್ದು, ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಧರ್ಮಸ್ಥಳದ ಕುರಿತು ಕೇಳಿಬರುತ್ತಿರುವ ಸಾಮೂಹಿಕ ದಫನ, ಹತ್ಯೆ, ಅತ್ಯಾಚಾರ ಮುಂತಾದ ಗಂಭೀರ ಆರೋಪಗಳ ಬಗ್ಗೆ ಸಮಗ್ರವಾದ ತನಿಖೆಯಾಗಬೇಕೆಂದು ಸಂತೋಷ್ ಕುಮಾರ್ ಜು.19ರಂದು ಬರೆದ ಪತ್ರದಲ್ಲಿ ಆಗ್ರಹಿಸಿದ್ದರು.
ತಲೆಬುರುಡೆಯನ್ನು ಕೊಟ್ಟಿದ್ದು ಜಯಂತ್. ತಾನು ಅದನ್ನು ಧರ್ಮಸ್ಥಳದಿಂದ ತಂದೇ ಇಲ್ಲವೆಂದು ಚಿನ್ನಯ್ಯ ಎಸ್ಐಟಿ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಜಯಂತ್ ಮಾತ್ರ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್ ಕೊಟ್ಟಿದ್ದು ಎಂದಿದ್ದಾರೆ. ಇದನ್ನು ಮಟ್ಟಣನವರ್ ನಿರಾಕರಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ಕೇರಳ ಸಂಸದನ ಹೆಸರು ಪ್ರಕರಣದಲ್ಲಿ ತಳಕುಹಾಕಿಕೊಂಡಿದೆ.
ತಲೆಬುರುಡೆ ಪ್ರಕರಣ ಹಾಗೂ ಒಟ್ಟಾರೆ ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ಪೊಲೀಸರು ಈವರೆಗೆ ಒಟ್ಟು 11 ಸೆಕ್ಷನ್ಗಳ ಅಡಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರಗಳನ್ನು ಆಧರಿಸಿ ಸೆಕ್ಷನ್ಗಳನ್ನು ಅಳವಡಿಕೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR ನಂಬರ್ 39/2025 ರಲ್ಲಿ BNS 211(A), 336, 230, 231, 229, 227, 228, 240, 236, 233, 248 ಸೆಕ್ಷನ್ ಅಳವಡಿಕೆ ಮಾಡಲಾಗಿದೆ.