ಮಂಗಳೂರು: ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರದ ಷಡ್ಯಂತ್ರಕ್ಕೆ ಕೇರಳದಲ್ಲೂ ಒಂದು ಲಿಂಕ್ ಇರುವುದು ಈಗ ಬಹಿರಂಗವಾಗಿದೆ. ಕೇರಳದ ಮನಾಫ್ ಎಂಬ ಯೂಟ್ಯೂಬರ್ ಕೇರಳದಲ್ಲಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದ. ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ, ದೇವಸ್ಥಾನದವರೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆತ ಮಲಯಾಳಂ ಯೂಟ್ಯೂಬ್ ಚಾನಲ್‌ಗಳು, ಟಿವಿ ವಾಹಿನಿಗಳಲ್ಲಿ ಈತ ಪ್ರಚಾರ ಮಾಡಿದ್ದ. ಈಗ ಈತನೂ ಬುರುಡೆ ಷಡ್ಯಂತ್ರದಲ್ಲಿ ಶಾಮೀಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅವನನ್ನು ವಿಚಾರಣೆಗೆ ಕರೆಸಲಿದೆ.
ಪ್ರಕರಣದ ನಂಬರ್ ಒನ್ ಆರೋಪಿ ಚಿನ್ನಯ್ಯ ತಂದಿದ್ದ ಬುರುಡೆ ಎಲ್ಲಿಯದ್ದು ಎನ್ನುವ ರಹಸ್ಯ ಬಹಿರಂಗಗೊಂಡಿದೆ. ಕಾಡಿನಿಂದ ಬುರುಡೆ ತಂದಿದ್ದ ಒರಿಜಿನಲ್ ವಿಡಿಯೋ ಈಗ ಮನಾಫ್‌ನ ಮೊಬೈಲ್‌ನಲ್ಲಿರುವುದು ಬಹಿರಂಗವಾಗಿದೆ.
ಕಳೆದ ಜುಲೈ 11ರಂದೇ ಕೇರಳದ ಯೂಟ್ಯೂಬರ್ ಮನಾಫ್ ಎಂಬಾತನ ಯುಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್ ಆಗಿದೆ. ಈ ನಡುವೆ ಬಂಗ್ಲೆಗುಡ್ಡದಿಂದ ಬುರುಡೆ ತಂದಿರುವುದಾಗಿ ತಿಮರೋಡಿ ಆಪ್ತ ಜಯಂತ್ ಹೇಳಿದ್ದ. ಕಾಡಿನಲ್ಲೇ ಈ ವಿಡಿಯೋ ಶೂಟ್ ಮಾಡಿ ಅಪ್‌ಲೋಡ್ ಮಾಡಲಾಗಿತ್ತು. ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲಿ, ಭೂಮಿಯ ಮೇಲ್ಬಾಗದಲ್ಲೇ ಬುರುಡೆ ಪತ್ತೆಯಾಗಿತ್ತು. ಬಳಿಕ ಕತ್ತಿ ಮೂಲಕ ಬುರುಡೆ ಹೊರತೆಗೆಯಲಾಗಿತ್ತು ಈ ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿದ ವಿಡಿಯೋವನ್ನು ಮನಾಫ್ ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಆ ಬಳಿಕವೇ ಬುರುಡೆಯನ್ನ ಧರ್ಮಸ್ಥಳಕ್ಕೆ ತರಲಾಗಿತ್ತು.
ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬರ್ ಮನಾಫ್‌ಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿದೆ. ಆರಂಭದಿಂದಲೂ ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಥೆ ಕಟ್ಟಿದ್ದ ಮನಾಫ್, ಕೇರಳಕ್ಕೂ ಬುರುಡೆ ಕಥೆಯನ್ನ ಹಬ್ಬಿಸಿದ್ದ. ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಮೇಲೆ ಅತ್ಯಾಚಾರ ಆಗಿದೆ, ಕೊಲೆ ಮಾಡಿ ಹೂಳಲಾಗಿದೆ ಎಂದು ಹಬ್ಬಿಸಿದ್ದ ಎಂದು ಎಸ್‌ಐಟಿ ಮೂಲಗಳಿಂದ ತಿಳಿದುಬಂದಿದೆ.
ಯಾರು ಈ ಮನಾಫ್?
2024 ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ ಬರೋಬ್ಬರಿ 11 ಮಂದಿ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಿದ್ದ. ಈ ಮನಾಫ್ ಅದೇ ಲಾರಿಯ ಮಾಲೀಕ ಹಾಗೂ ಕೇರಳ ಭಾಗದ ಯೂಟ್ಯೂಬರ್ ಕೂಡ.