ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸಾಮೂಹಿಕ ಹೂತು ಹಾಕಿದ ಪ್ರಕರಣ ಸಂಬಂಧ ಸ್ಥಾಪಿಸಿರುವ ವಿಶೇಷ ತನಿಖಾ ದಳದ (ಎಸ್ಐಟಿ) ಕಚೇರಿಗೆ 15 ವರ್ಷಗಳ ಹಿಂದೆ ನಡೆದಿದ್ದ ಮತ್ತೊಂದು ಅನುಮಾನಾಸ್ಪದ ಸಾವಿನ ಕುರಿತು ದೂರು ನೀಡಲಾಗಿದೆ. ಸಾಮಾಜಿಕ ಹೋರಾಟಗಾರ ಮತ್ತು ಇಚಿಲಂಪಾಡಿ ನಿವಾಸಿ ಜಯಂತ್ ಟಿ. ಈ ದೂರು ಸಲ್ಲಿಸಿದ್ದಾರೆ.
ಸುಮಾರು 15 ವರ್ಷಗಳ ಹಿಂದೆ ಸಾವಿಗೀಡಾದ ಬಾಲಕಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಧರ್ಮಸ್ಥಳ ಗ್ರಾಮದಲ್ಲಿ ಹೂಳಲಾಗಿತ್ತು ಎಂದು ಜಯಂತ್ ಟಿ. ಆರೋಪಿಸಿದ್ದಾರೆ. “ಅದು ಕೊಲೆಯೋ ಅಥವಾ ಬೇರೆ ಕಾರಣಕ್ಕೋ ಗೊತ್ತಿಲ್ಲ, ಆದರೆ ಶವ ಕೊಳೆತ ಸ್ಥಿತಿಯಲ್ಲಿತ್ತು” ಎಂದು ಅವರು ಹೇಳಿದ್ದಾರೆ.
ಮೃತ ಬಾಲಕಿಯ ಶವವನ್ನು ಹೂತು ಹಾಕಿದ ಸ್ಥಳ ತನಗೆ ಗೊತ್ತಿದೆ ಮತ್ತು ತಾನು ಇದಕ್ಕೆ ಪ್ರತ್ಯಕ್ಷದರ್ಶಿ ಎಂದು ಜಯನ್ ತಿಳಿಸಿದ್ದಾರೆ. “ನನಗೆ ಈಗಲೂ ಆ ಜಾಗ ಗೊತ್ತಿದೆ, ಅದನ್ನು ಎಸ್ಐಟಿ ಅಧಿಕಾರಿಗಳಿಗೆ ತೋರಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಈ ಕುರಿತು ಎಲ್ಲಾ ಸಾಕ್ಷಿಗಳನ್ನು ಇಟ್ಟುಕೊಂಡೇ ಆರೋಪ ಮಾಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸೋಮವಾರ ಬರಲು ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಜಯಂತ್ ಟಿ. ಮಾಧ್ಯಮಗಳಿಗೆ ತಿಳಿಸಿದ್ದಾರೆ.