ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕೊಲೆ, ಮೃತದೇಹ ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ನೇತ್ರಾವತಿ ನದಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಶವಗಳ ಅವಶೇಷಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯದಲ್ಲಿ ಸುಮಾರು 50ರಷ್ಟು ಸಿಬ್ಬಂದಿಗಳನ್ನು ಎಸ್ಐಟಿ ನಿಯೋಜಿಸಿದೆ ಎಂದು ತಿಳಿದು ಬಂದಿದೆ.
ಈ ಪ್ರದೇಶದಲ್ಲಿ ಹಲವಾರು ಮೃತದೇಹಗಳ ಅವಶೇಷಗಳಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಸಾಕ್ಷಿ ಚಿನ್ನಯ್ಯ ಅವರು SITಗೆ ನೀಡಿದ್ದ ತಲೆಬುರುಡೆಯ ಅವಶೇಷ ಕೂಡ ಇದೇ ಸ್ಥಳದಿಂದ ತರಲಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ.
ಸೌಜನ್ಯಾಳ ಮಾವ ವಿಠಲ ಗೌಡ ಅವರು ಕೂಡ ಈ ಹಿಂದೆ ಸ್ಥಳ ಮಹಜರು ನಡೆಸುವ ಸಂದರ್ಭದಲ್ಲಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಅನೇಕ ಮೃತದೇಹಗಳ ಅವಶೇಷಗಳನ್ನು ನೋಡಿದ್ದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ಆಧಾರದ ಮೇಲೆ ಮತ್ತು ಹೆಚ್ಚಿನ ಮಾಹಿತಿ ಕಲೆಹಾಕಲು, ಸುಮಾರು 12 ಎಕರೆಗಳಷ್ಟು ವ್ಯಾಪ್ತಿಯ ಈ ಅರಣ್ಯ ಪ್ರದೇಶವನ್ನು ಶೋಧಿಸಲು SIT ನಿರ್ಧರಿಸಿತ್ತು.
ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಸೇರಿದ ಈ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲು SIT ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡಿದೆ. ಇಂದು ಬೆಳಗ್ಗೆಯಿಂದಲೇ ಶೋಧ ಕಾರ್ಯ ಆರಂಭವಾಗಿದ್ದು, ಇದರಿಂದ ಪ್ರಕರಣದ ತನಿಖೆಗೆ ಹೊಸ ದಿಕ್ಕು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.