ಬೆಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಪೂರ್ಣ ಮಾಡಲು ಸಮಯ ನಿಗದಿ ಮಾಡಿಲ್ಲ. ಎಸ್‌ಐಟಿ ತನಿಖೆ ನಡೆಸುವಾಗಲೇ ಎನ್‌ಐಎ ತನಿಖೆಯೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ತನಿಖೆ ತ್ವರಿತವಾಗಿ ಆಗಬೇಕು ಎಂದು ಹೇಳಿದ್ರೆ ಎಸ್‌ಐಟಿ ಅವರಿಗೆ ಅವರದ್ದೇ ಆದ ತೀರ್ಮಾನ ಇರುತ್ತದೆ. ಎಸ್‌ಐಟಿ ಅವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯೋವರೆಗೂ ಅವರು ಯಾವ ವಿಚಾರಗಳನ್ನು ಹೇಳುವ ಹಾಗೇ ಇಲ್ಲ. ನಾವು ಹೇಳೋ ಹಾಗೇ ಇಲ್ಲ. ತನಿಖೆ ತ್ವರಿತವಾಗಿ ಆಗಲಿ ಅಂತ ಹೇಳಬಹುದು. ಎಸ್‌ಐಟಿಗೆ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ ಅದನ್ನ ಮಾಡ್ತಾರೆ. ಅದರಲ್ಲಿ ಅವರಿಗೆ ಬೇರೆ ಬೇರೆ ಮಾಹಿತಿ ಸಿಗುವ ಹಾಗಿದ್ದರೆ ಅವರೇ ತನಿಖೆ ಮಾಡಿಕೊಳ್ತಾರೆ. ಅದಕ್ಕೆ ನಾವು ಯಾವುದೇ ಡೈರೆಕ್ಷನ್ಸ್ ಕೊಡೋದಿಲ್ಲ” ಎಂದು ಹೇಳಿದರು.
ಸೌಜನ್ಯ ತಾಯಿ ಕೊಟ್ಟಿರುವ ದೂರು ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಅದನ್ನ ಎಸ್‌ಐಟಿ ಅವರು ನಿರ್ಧಾರ ಮಾಡ್ತಾರೆ. ಇದಕ್ಕೂ ಅದಕ್ಕೂ ಲಿಂಕ್ ಇದೆಯಾ? ಇಲ್ಲವಾ? ಹಾಗೂ ತನಿಖೆ ಮಾಡಬೇಕಾ? ಬೇಡವಾ? ಅಂತ ಎಸ್‌ಐಟಿ ನಿರ್ಧರಿಸಿ ತನಿಖೆ ಮಾಡುತ್ತದೆ. ನಾವು ಅದನ್ನ ಹೇಳೋಕೆ ಸಾಧ್ಯವಿಲ್ಲ. ಧರ್ಮಸ್ಥಳ ಕೇಸ್ ತನಿಖೆ ಇಷ್ಟೇ ದಿನದಲ್ಲಿ ಮಾಡಿ ಅಂತ ಹೇಳಿಲ್ಲ. ಆದಷ್ಟೂ ಬೇಗ ತನಿಖೆ ಮಾಡಿ ಅಂತ ಹೇಳಿದ್ದೇವೆ. ಸಮಯ ನಿಗದಿ ಮಾಡೋಕೆ ಆಗೋದೇ ಇಲ್ಲ. ತನಿಖೆ ಹೇಗೆ ಹೋಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬೇಗ ಮುಗಿದರೆ ಬೇಗ ವರದಿ ಕೊಡ್ತಾರೆ. ತನಿಖೆ ಪೂರ್ತಿ ಮುಗಿಯುವವರೆಗೂ ಅವರು ತನಿಖೆ ಮಾಡುತ್ತಲೇ ಇರುತ್ತಾರೆ” ಎಂದರು.
ಬಿಜೆಪಿ-ಜೆಡಿಎಸ್‌ನಿಂದ ಧರ್ಮಸ್ಥಳ ಯಾತ್ರೆ ವಿಚಾರವಾಗಿ ಮಾತನಾಡಿದ ಅವರು, “ತನಿಖೆ ಹೀಗೆ ಆಗುತ್ತೆ, ಆಗಬೇಕು, ನಾಳೆ ತನಿಖೆ ಮುಗಿಸಿ ಕೊಡಿ ಎಂದು ಹೇಳೋಕೆ ಆಗಲ್ಲ. ಯಾವುದೇ ತನಿಖೆಯಾದರೂ ಕೂಡ ನಾವು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ರಾಜಕೀಯಕ್ಕೆ ತಿರುಗಿದರೂ ಕೂಡ ನಾವು ಎಸ್‌ಐಟಿ ಅವರಿಗೆ ಮುಂದಿನ ವಾರ ಮುಗಿಸಿ, ವರದಿ ಕೊಡಿ ಎಂದು ಹೇಳೋಕಾಗಲ್ಲ” ಎಂದು ನುಡಿದರು.