ಧರ್ಮಸ್ಥಳ ಪ್ರಕರಣದ ರಸಹ್ಯವನ್ನು ಪತ್ತೆ ಹಚ್ಚಲು ನೇತ್ರಾವತಿ ಸ್ನಾನಘಟ್ಟದ ಬಳಿ ಎಸ್ಐಟಿ ಕಾರ್ಯಾಚರಣೆ ಗೆ ಇಳಿದಿದೆ. ಬುರುಡೆ ರಹಸ್ಯ ಹೇಳ್ತೀನಿ ಎಂದಿರುವ ಅನಾಮಿಕ ವ್ಯಕ್ತಿಯನ್ನು ಕರೆತಂದು ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ದೂರುದಾರ ಮಣ್ಣು ಮಾಡಿದ್ದಾನೆ ಎನ್ನಲಾಗಿರುವ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.
ಸತತವಾಗಿ ಎರಡು ದಿನಗಳ ವಿಚಾರಣೆ ಬಳಿಕ 3ನೇ ದಿನವಾದ ಇಂದು ಅನಾಮಿಕ ವ್ಯಕ್ತಿಯನ್ನು ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾರೆ. ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಹಾಗೂ FSL ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಆ ಜಾಗದಲ್ಲಿ ಯಾವುದಾದರೂ ಕಳೆಬರ ಸಿಗುತ್ತಾ ಎಂದು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
SIT ವಿಚಾರಣೆಯ ಪ್ರಮುಖ ಹಂತ ಅಂದರೆ ಶವ ಹೂತಿಟ್ಟಿರೋ ಬಗ್ಗೆ ದೂರು ಕೊಟ್ಟಿದ್ದ ಅನಾಮಿಕ ವ್ಯಕ್ತಿ ಜೊತೆಗೆ 2 ದಿನ ವಿಚಾರಣೆ ನಡೆದಿದೆ. ದೂರುದಾರನನ್ನು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ SIT ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ದೂರುದಾರ ವ್ಯಕ್ತಿ ಕೇರಳದಿಂದ ಮೊನ್ನೆ ಬೆಳಗ್ಗೆ 10.55ಕ್ಕೆ ವಕೀಲರ ಜೊತೆಗೆ IB ತಲುಪಿ 11 ಗಂಟೆಗೆ ವಿಚಾರಣೆಗೆ ಹಾಜರಾಗಿದ್ದ.
ಅಲ್ಲದೇ ದೂರುದಾರನ ಗುರುತು ಯಾರಿಗೂ ಸಿಗಬಾರದು ಅಂತ ಮುಖಕ್ಕೆ ಮುಸುಕು ಹಾಕಿ ಕರೆದುಕೊಂಡು ಬರಲಾಗಿತ್ತು. SIT ಕಚೇರಿಯಲ್ಲಿ SIT ಅಧಿಕಾರಿಗಳಾದ ಜಿತೇಂದ್ರ ದಯಾಮ ಹಾಗೂ ಅನುಚೇತ್ ವಿರಾಮ ನೀಡದೇ ಸತತ ವಿಚಾರಣೆ ನಡೆಸಿದ್ದರು. ಸತತ 6 ಗಂಟೆಗಳ ಹೆಚ್ಚು ಕಾಲ ವಿಚಾರಣೆ ಮುಂದುವರಿಸಿದ್ದರು. ದೂರುದಾರನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸದ್ಯ 3ನೇ ದಿನವಾದ ಇಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಅನಾಮಿಕನ ಜತೆ ಎಸ್ಐಟಿ ಅಧಿಕಾರಿಗಳು ಹಾಗೂ FSL ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ.