ಧರ್ಮಸ್ಥಳ : ಧರ್ಮಸ್ಥಳದ ಆನೆ ಮಾವುತ ನಾರಾಯಣ ಹಾಗೂ ತಂಗಿ ಯಮುನಾ ಕೊಲೆ ಕೇಸ್ ಸಂಬಂಧ ಕೊಲೆಯಾಗಿರುವ ನಾರಾಯಣ ಅವರ ಪುತ್ರ ಗಣೇಶ ಹಾಗೂ ಪುತ್ರಿ ಭಾರತಿ ಎಸ್‌ಐಟಿಗೆ ಮತ್ತೆ ದೂರು ನೀಡಿದ್ದಾರೆ. ಹೈಕೋರ್ಟ್‌ನಲ್ಲಿ ಕೇಸ್ ಇದ್ದ ಹಿನ್ನೆಲೆಯಲ್ಲಿ ದೂರು ತೆಗೆದುಕೊಳ್ಳಲು ಆಗವುದಿಲ್ಲ ಅಂತ ಎಸ್ಐಟಿ ಈ ಮೊದಲು ದೂರು ನೀಡಲು ಬಂದಾಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಿಂದ ದೂರು ಹಿಂಪಡೆದು ಮತ್ತೆ ಎಸ್‌ಐಟಿಗೆ ದೂರು ನೀಡಿದ್ದಾರೆ.
2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ ಆನೆ ಮಾವುತ ಹಾಗೂ ಅವರ ಸಹೋದರಿ ಯಮುನಾ ಅವರ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಆಗ್ರಹಿಸಿ ಆ.18ರಂದು ವಿಶೇಷ ತನಿಖಾ ದಳಕ್ಕೆ(ಎಸ್ಐಟಿ)ಕ್ಕೆ ದೂರು ಸಲ್ಲಿಸಿದ್ದರು. ಆಗ ಹೈಕೋರ್ಟ್‌ನಲ್ಲಿ ಕೇಸ್ ಇರುವುದರಿಂದ ದೂರು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಎಸ್‌ಐಟಿ ಹೇಳಿತ್ತು.
ಧರ್ಮಸ್ಥಳದಲ್ಲಿ ಆನೆ ಮಾವುತನಾಗಿ ಕೆಲಸ ಮಾಡಿ ನಿವೃತ್ತರಾಗಿದ್ದ ನಾರಾಯಣ ಸಫಲ್ಯ ಮತ್ತು ಅವರ ಸಹೋದರಿ (ದೂರುದಾರರ ಸೋದರತ್ತೆ) ಯಮುನಾ 2012ರ ಸೆಪ್ಟಂಬರ್ 21ರಂದು ಬೂರ್ಜೆಯಲ್ಲಿರುವ ಮನೆಯಲ್ಲಿ ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಾರಾಯಣ ಅವರ ಹಿರಿಯರ ಕಾಲದಿಂದಲೂ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿರುವ ಮನೆಯಲ್ಲಿ ಸಹೋದರಿ ಯಮುನಾ ಅವರೊಂದಿಗೆ ವಾಸ ಮಾಡಿಕೊಂಡಿದ್ದರು.