ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆ ಆರೋಪಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖಾ ಹಂತದಲ್ಲೇ ಎಸ್ಐಟಿ ತನಿಖೆಗೆ ಕೊಡಿ ಎಂದರೆ ಪೊಲೀಸ್ ಇಲಾಖೆ ಇರುವುದೇತಕ್ಕೆ? ಈಗ ತನಿಖೆ ನಡೆಯುತ್ತಿದೆ. ಸ್ಥಳೀಯ ಪೊಲೀಸರೇನಾದರೂ ಹೆಚ್ಚಿನ ತನಿಖೆ ಅಗತ್ಯವಿದೆ ಎಂದರೆ ಸರಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದೇನೆ. ಯಾರ್ಯಾರೋ ಹೇಳುತ್ತಾರೆಂದು ಎಸ್ಐಟಿ ರಚಿಸಲು ಆಗುವುದಿಲ್ಲ. ವ್ಯವಸ್ಥೆಯೊಳಗೆ ಒಂದು ನಿಯಮವಿದೆ. ಅದರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದರು.
ಪ್ರತಿಪಕ್ಷ ಶಾಸಕರಿಗೆ ಅನುದಾನ ತಾರತಮ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಡಳಿತ ಪಕ್ಷದ ಶಾಸಕರಿಗೆ ಒಂದು, ವಿಪಕ್ಷದವರಿಗೆ ಒಂದು ರೀತಿ ಬಿಜೆಪಿಯವರೇ ಮಾಡಿದ್ದರು. ಅವರ ಶಾಸಕರಿಗೆ 50 ಕೋಟಿ ರೂ. ಕೊಟ್ಟಿದ್ದರು. ನಮಗೆಲ್ಲ ಆಗ 25 ಕೋಟಿ ರೂ. ಕೊಟ್ಟಿದ್ದರು. ಕೆಲವರಿಗೆ 20, 10 ಕೋಟಿ ರೂ. ಕೊಟ್ಟಿದ್ದರು. ಅದನ್ನೇ ನಾವೂ ಅನುಸರಿಸುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.