ಏರೋಸ್ಪೇಸ್ ನಲ್ಲಿ ಕೆಲಸದಲ್ಲಿದ್ದ ಧರ್ಮಸ್ಥಳದ ಆಕಾಂಕ್ಷ ಪಂಜಾಬ್ ನಲ್ಲಿ ಆತ್ಮಹತ್ಯೆಮಾಡಿಕೊಂಡ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಪ್ರೇಮ ವೈಫಲ್ಯವೇ ಕಾರಣ ಎನ್ನಲಾಗಿದೆ.
ಆಕಾಂಕ್ಷ ಮೂಲತಃ ಧರ್ಮಸ್ಥಳದವರು. ಈಗಿನ್ನು 22 ವರ್ಷ ವಯಸ್ಸು. ಧರ್ಮಸ್ಥಳ ಬಳಿಯ ಬೊಳಿಯಾರ್ ಎಂಬ ಗ್ರಾಮದ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಯ ಮಗಳು. ಕಳೆದ 6 ತಿಂಗಳ ಹಿಂದಷ್ಟೇ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಎಲ್ಪಿಯು ಪಗ್ವಾಡ ಕಾಲೇಜಿನಲ್ಲಿ ಸರ್ಟಿಫಿಕೇಟ್ ಪಡೆಯೋದಕ್ಕೆಂದು ಹೋದ ಆಕಾಂಕ್ಷ ಪ್ರಾಣ ಕಳೆದುಕೊಂಡಿದ್ದಾರೆ.
ಎಲ್ಪಿಯು ಪಗ್ವಾಡ ಕಾಲೇಜಿನಲ್ಲಿ ಬಿಜಿಲ್ ಮ್ಯಾಥ್ಯೂ ಪ್ರೊಫೆಸರ್ ಮೂಲತಃ ಕೇರಳದವರು. ಮ್ಯಾಥ್ಯೂ ಮೇಲೆ ಪ್ರೇಮಾಂಕುರವಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಆಕಾಂಕ್ಷ, ಮ್ಯಾಥ್ಯೂ ಬಳಿ ಮದುವೆಯಾಗುವಂತೆ ಕೇಳಿದ್ದರಂತೆ. ಮನೆಗೆ ಹೋಗಿ, ಕಾಲೇಜಿಗೆ ಹೋಗಿ ಗಲಾಟೆಯನ್ನು ಮಾಡಿದ್ದರಂತೆ. ಆದರೆ ಮ್ಯಾಥ್ಯೂ ಯಾವುದೇ ರೀತಿಯ ಉತ್ತರ ನೀಡಿರಲಿಲ್ಲವಂತೆ. ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮ್ಯಾಥ್ಯೂ ಅವರನ್ನ ಪಂಜಾಬ್ ನ ಜಲಂದರ್ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಪೋಸ್ಟ್ ಮಾರ್ಟಮ್ ನಂತರ ಮೃತದೇಹವನ್ನು ಧರ್ಮಸ್ಥಳಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.