ಬೆಂಗಳೂರು: ನೂರಾರು ಶವಗಳನ್ನು ಹೂಳಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣ ಸದನದಲ್ಲಿ ಕೋಲಾಹಲ ಎಬ್ಬಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಸದನದಲ್ಲಿ ಉತ್ತರ ನೀಡಿದ್ದು, ರಾಜ್ಯ ಸರ್ಕಾರ ರಚನೆ ಮಾಡಿದ SIT ತಂಡದ ಕಾರ್ಯಾಚರಣೆಯಲ್ಲಿ ಎರಡು ಕಡೆಗಳಲ್ಲಿ ಒಂದು ಅಸ್ಥಿಪಂಜರ ಮತ್ತು ಒಂದಷ್ಟು ಮೂಳೆಗಳು ದೊರಕಿವೆ. ಅದನ್ನು ಎಸ್ಎಫ್ಎಲ್ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಲಭ್ಯವಾಗಿಲ್ಲ. ವರದಿ ದೊರೆಯುವ ವರೆಗೆ ಉತ್ಖನನ ಸ್ಥಗಿತಗೊಳಿಸಲಾಗುತ್ತದೆ ಎಂದಿದ್ದಾರೆ.
ಅಗೆದ ಇತರೆ ಜಾಗಗಳಲ್ಲಿ ಮೂಳೆಗಳು ಕೆಂಪು ಕಲ್ಲಿನ ಕಾರಣದಿಂದ ಕರಗಿರುವ ಸಾಧ್ಯತೆ ಇದ್ದು, ಆ ಕಾರಣಕ್ಕೆ ಎಲ್ಲಾ ಸ್ಥಳಗಳ ಮಣ್ಣಿನ ಸ್ಯಾಂಪಲ್ ಪರೀಕ್ಷೆಗೆ ಲ್ಯಾಬ್ಗೆ ಕಳುಹಿಸಲಾಗಿದೆ. ಅದರ ವಿಶ್ಲೇಷಣೆ ನಡೆಯಬೇಕಿದೆ. ಆಗ ನಿಜವಾದ ತನಿಖೆ ಆರಂಭವಾಗಲಿದೆ. ಈಗ ನಡೆದದ್ದು ಉತ್ಖನನ ಮಾತ್ರ. ಇನ್ನು ಸ್ಯಾಂಪಲ್ ಅನಾಲಿಸಿಸ್, ಡಿಎನ್ಎ ಸೇರಿ ಹಲವು ವಿಶ್ಲೇಷಣೆ ನಡೆಯಬೇಕಿದೆ. ಹಾಗೆಯೇ ದೂರುದಾರ ಮೊದಲು ತಂದ ಬುರುಡೆಯ ಪರೀಕ್ಷೆ ನಡೆಯಬೇಕಿದೆ. ಅದಕ್ಕೆ ವರದಿಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಹಾಗೆಯೇ ದೂರುದಾರನ ಬಂಧನ ಏಕಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ದೂರು ದಾರ ನ್ಯಾಯಾಲಯದ ಮೊರೆ ಹೋಗಿ ತನ್ನನ್ನು ಮತ್ತು ತನ್ನ ಕುಟುಂಬವನ್ನು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದ. ಹಾಗಾಗಿ ಅವನನ್ನು ಅರೆಸ್ಟ್ ಮಾಡುವಂತಿಲ್ಲ.ಯಾವ ಒತ್ತಡಕ್ಕೂ ಮಣಿಯದೆ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.