ಬೆಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ಖಾಲಿ ಡಬ್ಬ ಏನು ಇಲ್ಲ. ಅಲ್ಲಿ ಕೇವಲ ಸದ್ದು ಜಾಸ್ತಿ ಆಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಹೇಳಿಕೆ ನೀಡಿದ ಅವರು, ಈ ಪ್ರಕರಣದಲ್ಲಿ ಬಹಳ ಷಡ್ಯಂತ್ರ ನಡೆದಿದೆ. ಯಾರದ್ದು ಷಡ್ಯಂತ್ರ ಎಂದು ಈಗ ನಾನು ಹೇಳಲ್ಲ. ಬಹಳ ಪ್ಲ್ಯಾನ್ ಮಾಡಿ ಅವರ ಮೇಲೆ ಕಪ್ಪು ಚುಕ್ಕೆ ತರಲು ನೋಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಯಾರನ್ನೋ ತೇಜೋವಧೆ ಮಾಡಿ ನೂರಾರು ವರ್ಷದಿಂದ ಬಂದ ಪರಂಪರೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವನ್ಯಾರೋ ಒಬ್ಬ ನ್ಯಾಯಾಲಯಕ್ಕೆ ಹೋಗಿ ಹೇಳಿಕೆ ಕೊಟ್ಟಿದ್ದಾನೆ. ಹೇಳಿಕೆ ನೀಡಿದ್ದರಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಅಶೋಕ್ ರೈ ಮಾತಾಡಿದ್ದಾರೆ. ಯಾರು ಷಡ್ಯಂತ್ರ ಮಾಡುತ್ತಿದ್ದಾರೆ? ಸುಳ್ಳು ಆರೋಪ ಮಾಡುತ್ತಾರೆ ಅವರ ವಿರುದ್ಧ ಆಳಕ್ಕೆ ಆಗಿ ಹೋಗಿ ತನಿಖೆ ಮಾಡಿ ಕಾನೂನು ಕ್ರಮಕ್ಕೆ ಕೈಗೊಳ್ಳಲು ಹೇಳಿದ್ದೇವೆ. ಮುಖ್ಯಮಂತ್ರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದರು.
ಸೋಮವಾರ ಗೃಹ ಮಂತ್ರಿಗಳು ಎಲ್ಲಾ ವಿವರಗಳನ್ನು ತರಿಸಿಕೊಂಡು ಏನು ಹೇಳಬೇಕೋ ಅದನ್ನು ಹೇಳುತ್ತಾರೆ. ಹಿಂದೂ ಧರ್ಮ ಮಾತ್ರವಲ್ಲ ಯಾವುದೇ ಧರ್ಮದ ಭಾವನಗೆ ಚ್ಯುತಿ ಬರಬಾರದು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.
ಏನು ಇಲ್ಲದೇ ಬುರುಡೆ ಪ್ರಕರಣ ಮಾಡಿರುವುದು ನಮಗೆ ತಿಳಿದಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ತನಿಖೆ ನಡೆಯುತ್ತಿದೆ. ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಅವರದ್ದೇಯಾದ ವ್ಯಾಖ್ಯಾನ ಮಾಡಿದ್ದಾರೆ. ಅದಕ್ಕೆ ನಾನು ಕಮೆಂಟ್ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು.
ಧರ್ಮಸ್ಥಳ ಆಗಲಿ ಯಾವುದೇ ಕ್ಷೇತ್ರದ ಗೌರವಕ್ಕೆ ತೊಂದರೆ ಮಾಡಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದ್ದು ನ್ಯಾಯದ ಬಗ್ಗೆ ಧರ್ಮದ ಬಗ್ಗೆ ಸರಿಸಮಾನವಾಗಿದ್ದೇವೆ ಎಂದು ನುಡಿದರು.