ಬೆಂಗಳೂರು: ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.2.73ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಇದರಿಂದ ಡೀಸೆಲ್ ಬೆಲೆ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಈ ಹಿಂದೆ ಶೇ.18.44 ರಷ್ಟು ಇದ್ದ ತೆರಿಗೆ ಶೇ.21.17ಕ್ಕೆ ಏರಿಕೆಯಾಗಿದೆ.ಹಾಲು, ಮೊಸರು ಮತ್ತು ವಿದ್ಯುತ್ ಸಹಿತ ಹಲವು ದರ ಏರಿಕೆ ನಿನ್ನೆಯಿಂದ ಜಾರಿಗೆ ಬಂದಿದ್ದು, ಇದರ ಬೆನ್ನಿಗೆ ದಿಢೀರ್ ಎಂದು ಡೀಸೆಲ್ ಬೆಲೆ ಏರಿಕೆಯ ಆದೇಶ ಹೊರಬಿದ್ದಿದೆ. ಕಳೆದ ವರ್ಷವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿತ್ತು. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿತ್ತು.ಸರಕು ಸಾಗಾಣಿಕೆ ಮಾಡುವ ವಾಹನಗಳಾದ ಟ್ರಕ್, ಲಾರಿಗಳು ಡೀಸೆಲ್ ಬಳಸುವ ಕಾರಣ ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮ ದಿನ ಬಳಕೆಯ ವಸ್ತುಗಳ ಮೇಲೆ ತಟ್ಟಲಿದೆ. ಇದರಿಂದಾಗಿ ದಿನ ಬಳಕೆ ತರಕಾರಿ, ಆಹಾರ ವಸ್ತುಗಳ ಬೆಲೆಯೂ ಏರಿಕೆ ಆಗಲಿದೆ.2024ರ ಜೂನ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3.02 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 3 ರೂ. ಹೆಚ್ಚಳ ಮಾಡಲಾಗಿತ್ತು.
ದರ ಹೆಚ್ಚಳದಿಂದ ಪೆಟ್ರೋಲ್ ದರ 102.84 ರೂ. ಆಗಿದ್ದರೆ ಡಿಸೇಲ್ ದರ 89.79 ರೂ.ಗೆ ಏರಿಕೆಯಾಗಿತ್ತು. ಈ ದರ ಏರಿಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗೆ ಹಣವಿಲ್ಲ ಎಂದು ತೈಲ ಬೆಲೆ ಏರಿಸಿಲ್ಲ ಎಂಬುದಾಗಿ ಸಮರ್ಥಿಸಿಕೊಂಡಿದ್ದರು.ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2 ರೂ. ಇಳಿಕೆ ಮಾಡಿತ್ತು. ಇಳಿಕೆ ಮಾಡಿದ ನಂತರ ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 99.83 ರೂ. ಆಗಿದ್ದರೆ ಡೀಸೆಲ್ ದರ 85.93 ರೂ. ಇತ್ತು.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.02 ರೂ. ಏರಿಕೆ ಮಾಡಿದ್ದರೆ ಡೀಸೆಲ್ ದರ 5 ರೂ. ಏರಿಕೆ ಮಾಡಿದಂತಾಗಿದೆ.