ಬೆಂಗಳೂರು : ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಐಜಿಪಿ ಡಿ. ರೂಪಾ ಅವರ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನು ಐಎಸ್‌ಡಿಯಿಂದ ಗೃಹರಕ್ಷಕ ದಳ ಹಾಗೂ ಸಿವಿಲ್ ಡಿಫೆನ್ಸ್ ವಿಭಾಗದ ಡಿಐಜಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಡಿ ರೂಪಾ ಮೌದ್ಗಿಲ್ ನಡುವಿನ ಗುದ್ದಾಟ ಕೋರ್ಟ್ನಲ್ಲಿದೆ. ಇದರ ನಡುವೆ ಡಿ.ರೂಪಾ ಮೌದ್ಗಿಲ್ ವಿರುದ್ಧ ಡಿಐಜಿ ವರ್ತಿಕಾ ಕಟಿಯಾರ್ ಗಂಭೀರ ಆರೋಪ ಮಾಡಿ ದೂರು ನೀಡಿದ್ದಾರೆ.
ಡಿ. ರೂಪಾ ಅವರು ಕೆಳಹಂತದ ಸಿಬ್ಬಂದಿಯನ್ನು ಬಳಸಿಕೊಂಡು ತಮ್ಮ ಕೊಠಡಿಯನ್ನು ಅನಧಿಕೃತವಾಗಿ ಪ್ರವೇಶಿಸಿ, ಕೆಲ ದಾಖಲೆಗಳನ್ನು ಇರಿಸಿದ್ದಾರೆ ಎಂದು ವರ್ತಿಕಾ ಕಟಿಯಾರ್ ದೂರಿದ್ದರು. ಕೆಳಹಂತದ ಮೂವರು ಸಿಬ್ಬಂದಿಯನ್ನು ಬಳಸಿಕೊಂಡು ಕಂಟ್ರೋಲ್ ರೂಮ್‌ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ಅಲ್ಲಿ ತಮ್ಮ ಕೊಠಡಿಯಲ್ಲಿನ ದಾಖಲೆಗಳನ್ನು ಇರಿಸಲಾಗಿದೆ. ಅವುಗಳನ್ನು ದುರುದ್ದೇಶದಿಂದ ಫೋಟೋ ತೆಗೆಸಿ, ವಾಟ್ಸ್ ಆ್ಯಪ್ ಮೂಲಕ ಪಡೆದುಕೊಂಡಿದ್ದಾರೆ ಎಂದು ವರ್ತಿಕಾ ಕಟಿಯಾರ್ ಆರೋಪಿಸಿದ್ದರು.