ನವದೆಹಲಿ : ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್(92) ಅವರು ವಯೋಸಹಜ ಕಾಯಿಲೆಯಿಂದ ಡಿ. 26ರಂದು ನಿಧರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇತರ ರಾಜಕೀಯ ಗಣ್ಯರು ಹಾಗೂ ಉದ್ಯಮ ಮತ್ತು ಸಿನಿರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಭಾರತದ ಅತ್ಯಂತ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರು: ಪ್ರಧಾನಿ ಮೋದಿ
ಭಾರತದ ಮಾಜಿ ಪ್ರಧಾನಿಯವರ ನಿಧನದಿಂದ ತೀವ್ರ ದುಃಖವಾಗಿದೆ. ಡಾ. ಮನಮೋಹನ್ ಸಿಂಗ್‌ಜಿ ಕಷ್ಟದ ಸಮಯದಲ್ಲಿ ಭಾರತದ ಆರ್ಥಿಕತೆಯನ್ನು ಪುನರ್ನಿರ್ಮಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಸೇವೆ ಮತ್ತು ಬುದ್ಧಿವಂತಿಕೆಗಾಗಿ ಅವರು ಮೆಚ್ಚುಗೆಗೆ ಪಾತ್ರರಾಗಿದ್ದರು. ಭಾರತದ ಪ್ರಗತಿಗೆ ಅವರ ಕೊಡುಗೆ ಸದಾ ಸ್ಮರಣೀಯ. ಅವರು ಭಾರತದ ಅತ್ಯಂತ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾಗಿದ್ದರು. ಮನಮೋಹನ್ ಸಿಂಗ್ ಹೆಸರಾಂತ ಅರ್ಥಶಾಸ್ತ್ರಜ್ಞರಾಗಿದ್ದರು. ಹಣಕಾಸು ಸಚಿವರಾಗಿ ಸೇರಿ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ದೇಶದ ಆರ್ಥಿಕತೆ ಬೆಳೆಯಲು ಭದ್ರವಾದ ಬುನಾದಿ ಹಾಕಿದ್ದರು. ಅವರ ಜೊತೆ ಸಂಸತ್ತಿನಲ್ಲಿ ಕಳೆದ ದಿನಗಳು ಕಣ್ಣಿಗೆ ಕಟ್ಟಿದಂತಿದೆ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ನಾನು ದಾರಿದೀಪ, ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ: ರಾಹುಲ್ ಗಾಂಧಿ
ಮನಮೋಹನ್ ಸಿಂಗ್ ಅವರು ಭಾರತವನ್ನು ಅಪಾರ ಬುದ್ಧಿವಂತಿಕೆ ಮತ್ತು ಸಮಗ್ರತೆಯಿಂದ ಮುನ್ನಡೆಸಿದರು. ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ಆಳವಾದ ತಿಳುವಳಿಕೆಯು ರಾಷ್ಟ್ರವನ್ನು ಪ್ರೇರೇಪಿಸಿತು. ಶ್ರೀಮತಿ ಕೌರ್ ಮತ್ತು ಕುಟುಂಬಕ್ಕೆ ನನ್ನ ಸಂತಾಪಗಳು. ನಾನು ದಾರಿದೀಪ ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ. ಅವರನ್ನು ಮೆಚ್ಚಿದ ಲಕ್ಷಾಂತರ ಜನರು ಅವರನ್ನು ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವ್ರ ಪ್ರಾಮಾಣಿಕತೆ ನಮಗೆ ಸ್ಫೂರ್ತಿ: ಪ್ರಿಯಾಂಕಾ ಗಾಂಧಿ
ಸರ್ದಾರ್ ಮನಮೋಹನ್ ಸಿಂಗ್ ಅವ್ರ ಪ್ರಾಮಾಣಿಕತೆ ಯಾವಾಗಲೂ ನಮಗೆ ಸ್ಫೂರ್ತಿ. ತಮ್ಮ ವಿರೋಧಿಗಳಿಂದ ತೀವ್ರ ದಾಳಿಗೆ ಒಳಗಾದರೂ ರಾಷ್ಟ್ರ ಸೇವೆಗೆ ಧೃಢವಾಗಿ ನಿಂತಿದ್ದರು. ಈ ದೇಶವನ್ನು ನಿಜವಾಗಿಯೂ ಪ್ರೀತಿಸುವವರಲ್ಲಿ ಅವರು ಶಾಶ್ವತವಾಗಿ ನಿಲ್ಲುತ್ತಾರೆ. ಅವರು ನಿಜವಾದ ಸಮಾನತಾವಾದಿ, ಬುದ್ಧಿವಂತ, ಧೈರ್ಯಶಾಲಿಯಾಗಿದ್ದರು. ರಾಜಕೀಯದ ಒರಟು ಜಗತ್ತಿನಲ್ಲಿ ವಿಶಿಷ್ಟವಾದ ಘನತೆ ಮತ್ತು ಸೌಮ್ಯ ವ್ಯಕ್ತಿ ಎಂದು ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥ: ಸಿಎಂ ಸಿದ್ದರಾಮಯ್ಯ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ. ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ. ಮೃತರ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.