ಅಹಮದಾಬಾದ್ : ಕಳೆದ ಬೆಳಗಾವಿ ಅಧಿವೇಶನದ ವೇಳೆ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಸೂಚನೆ ನೀಡಲಾಗಿತ್ತು. ಬ್ಲಾಕ್, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಅಹಮದಾಬಾದ್ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಲು ಗುಜರಾತ್‌ನ ಅಹಮದಬಾದ್‌ಗೆ ಡಿ.ಕೆ ಶಿವಕುಮಾರ್ ತೆರಳಿದ್ದಾರೆ ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆಯ ವಿಚಾರದಲ್ಲಿ ಒಂದೊಂದೇ ಬದಲಾವಣೆಗಳನ್ನು ತರಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಪಕ್ಷವಾಗಿ ಇನ್ನೂ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರು ಚರ್ಚೆ ನಡೆಸಿ ಒಟ್ಟಿಗೆ ಕೆಲಸ ಮಾಡುವುದಕ್ಕೆ ಈ ಸಮಾವೇಶ ಮುನ್ನುಡಿ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಲವಾರು ವಿಚಾರಗಳು ಸೇರಿದಂತೆ ಪಕ್ಷದ ಎಲ್ಲಾ ಘಟಕಗಳ ಬಲವರ್ಧನೆ ಬಗ್ಗೆ ಚರ್ಚೆ ಮಾಡಲಾಗುವುದು. ಕಳೆದ ವಾರ ದೆಹಲಿಯಲ್ಲಿ ಜಿಲ್ಲಾ ಮಟ್ಟದ ಅಧ್ಯಕ್ಷರ ಸಭೆ ನಡೆಸಲಾಗಿತ್ತು. 1924 ರಲ್ಲಿ ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಂಡು 100 ವರ್ಷಗಳು ಸಂದಿವೆ. ಗಾಂಧಿ ಅವರು ಏಕ ನಾಯಕತ್ವದಲ್ಲಿ ನಂಬಿಕೆ ಇಟ್ಟವರಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟು ನಡೆದವರು ಎಂದು ಹೇಳಿದರು.