ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ತಾಲ್ಲೂಕಿನ 320 ಆಶಾ ಕಾರ್ಯಕರ್ತೆಯರಿಗೆ ಟಿಹೆಚ್‍ಒ ಡಾ.ಬಿ.ವಿ.ಗಿರೀಶ್ ಅವರು ಉಚಿತ ಸಿಯುಜಿ ಸಿಮ್ ಕಾರ್ಡ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ, ಗುಣಮಟ್ಟದ ಹೆರಿಗೆ ಸೇವಾ ಸೌಲಭ್ಯ ಒದಗಿಸಲು ಸಾರ್ವಜನಿಕ ಆರೋಗ್ಯ ಕಾಪಾಡಲು, ವಲಯಗಳಲ್ಲಿ ಆಶಾ ಕಾರ್ಯಕರ್ತೆಯರು ಇಲಾಖೆ ಸಿಬ್ಬಂದಿಯವರಿಗೆ ಮೇಲ್ವಿಚಾರಣಾ ಅಧಿಕಾರಿಗಳಿಗೆ, ವೈದ್ಯರಿಗೆ ಪರಸ್ಪರ ಉಚಿತ ಕರೆಗಳನ್ನು ಮಾಡಲು ಮತ್ತು ಎಸ್‍ಎಂಎಸ್ ಕಳುಹಿಸಲು ಸಿಯುಜಿ ಸಿಮ್‍ಗಳು ತುಂಬಾ ಉಪಯುಕ್ತ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ. ಕೃಷ್ಣನಾಯಕ್ ಮಾತನಾಡಿ, ಸರ್ಕಾರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ಉಚಿತ ಸಿಮ್ ಕಾರ್ಡ್ ಒದಗಿಸುತ್ತಿದ್ದು, ಅವಶ್ಯಕ ಸಂದರ್ಭದಲ್ಲಿ ದೂರವಾಣಿ ಕರೆಗಳನ್ನು ಮಾಡುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ ಮಾತನಾಡಿ, ಸಾರ್ವಜನಿಕ ವಲಯಗಳಲ್ಲಿ ಫಲಾನುಭವಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಿಮ್ ಕಾರ್ಡ್‍ಗಳನ್ನು ಸದ್ಭಳಕೆ ಮಾಡಿಕೊಂಡು, ಕಾರ್ಯನಿರ್ವಹಿಸಬೇಕು. ಸಕಾಲಕ್ಕೆ ಗರ್ಭಿಣಿಯರ ನೋಂದಣಿ, ತಾಯಿ ಕಾರ್ಡ್ ವಿತರಣೆ ಮಾಡಿ, ವೈದ್ಯರಲ್ಲಿ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ನೀಡುತ್ತಾ ಪೌಷ್ಟಿಕ ಆಹಾರ ಸೇವನೆ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಿ, ಸಹಜ ಹೆರಿಗೆ ಮಾಡಿಸಲು ಉತ್ತೇಜನ ನೀಡಬೇಕೆಂದರು.
ತಾಲ್ಲೂಕು ಅರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ತಾಯಿ ಮರಣ ಮತ್ತು ಶಿಶು ಮರಣ ತಡೆಯಲು ಮತ್ತು ಸಾಂಕ್ರಾಮಿಕ ಹಾಗೂ ಅಸಂಕ್ರಾಮಿಕ ರೋಗಗಳ ನಿಯಂತ್ರಣ ಮಾಡುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಮಾಡುತ್ತಾ ಸಾರ್ವಜನಿಕರ ಆರೋಗ್ಯ ಕಾಪಾಡೋಣ ಎಂದರು.
ತಾಲ್ಲೂಕು ಆಶಾ ಮೆಂಟರ್ ತಬಿತಾ, ಸರ್ಕಾರದಿಂದ ಬಂದಂತಹ ಸೇವಾ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಆಶಾ ಕಾರ್ಯಕರ್ತೆಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಪಿಎಂ ಮಹಮ್ಮದ್ ಅಲಿ, ಲೆಕ್ಕಪರಿಶೋಧಕ ಅಬೀಬ್ ಉಲ್ಲಾ, ಗಣಕಯಂತ್ರ ಸಹಾಯಕಿ ನಾಗವೇಣಿ. ಸಿಬ್ಬಂದಿಯವರಾದ ಪ್ರತಿಭಾ, ಅಕ್ಷಯ, ಆಶಾ ಕಾರ್ಯಕರ್ತೆಯರು ಮತ್ತಿತರರು ಹಾಜರಿದ್ದರು

































