ಚಿತ್ರದುರ್ಗ: ಅಧಿಸೂಚಿತ (ರಿಸರ್ವ) ಅರಣ್ಯ ಪ್ರದೇಶಗಳ ದಾಖಲೆಗಳು ಸ್ಪಷ್ಟವಾಗಿದ್ದು, ಈಗಾಗಲೇ ಬಹುಪಾಲು ಪ್ರದೇಶಗಳ ಗಡಿ ರೇಖೆಗಳು ಸ್ಪಷ್ಟವಾಗಿರುತ್ತವೆ. ಆದರೂ ಗೊಂದಲವಿರುವ ಕೆಲವು ಕಡೆ ತಹಶೀಲ್ದಾರರು ಹಾಗೂ ವಲಯ ಅರಣ್ಯಾಧಿಕಾರಿಗಳು ಜಂಟಿ ಮೋಜಿಣಿ ನಡೆಸಿ ಗಡಿ ಗುರುತಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವನ (ಸಂರಕ್ಷಣೆ ಮತ್ತು ಸಂವರ್ಧನೆ) ಅಧಿನಿಯಮ 1980 ಮತ್ತು ತಿದ್ದುಪಡಿ ಅಧಿನಿಯಮ 1988 ಮತ್ತು ನಿಯಮ 2023ರಂತೆ ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆಗಳನ್ನು ಸಿದ್ದಪಡಿಸುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶಗಳ ಪಟ್ಟಿಯನ್ನು ಪರಿಶೀಲಿಸಿಕೊಂಡು ಮಾನದಂಡಗಳನ್ವಯ ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಜಂಟಿ ಪರಿಶೀಲನಾ ಸಮಿತಿ ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳಿಗೆ ನಿರ್ದೇಶಿಸಿದ ಅವರು, ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆ ಸಂಬಂಧ ಸರ್ವೇ ಕಾರ್ಯ ನಡೆಸಲು ಷೆಡ್ಯೂಲ್ ಪ್ರಕಾರ ಸಮಯ ನಿಗಧಿಪಡಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಪರಿಭಾವಿತ ಅರಣ್ಯ ಭೂಮಿಗಳ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿಗಾಗಿ ಎಲ್ಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯ ನಾಯ್ಕ್ ಮಾತನಾಡಿ, ವನ (ಸಂರಕ್ಷಣೆ ಮತ್ತು ಸಂವರ್ಧನೆ) ಅಧಿನಿಯಮ 1980 ಮತ್ತು ತಿದ್ದುಪಡಿ ಅಧಿನಿಯಮ 1988 ಮತ್ತು ನಿಯಮ 2023ರಂತೆ ಸರ್ವೋಚ್ಛ ನ್ಯಾಯಾಲಯದ ರಿಟ್ಪಿಟಿಷನ್ ಸಂಖ್ಯೆ 1164/2023, 2024ರ ಫೆಬ್ರವರಿ 19ರಲ್ಲಿನ ಆದೇಶದಂತೆ ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆಗಳನ್ನು ಸಿದ್ದಪಡಿಸುವ ಸಲುವಾಗಿ ರಾಜ್ಯಮಟ್ಟದ ಸಮಿತಿ, ಕಂದಾಯ ವಿಭಾಗ ಮಟ್ಟದ ಸಮಿತಿ, ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಅಧಿಸೂಚಿತ ಮತ್ತು ಘೋಷಿತ ಅರಣ್ಯ ಪ್ರದೇಶಗಳು, ಯಾವುದೇ ಸರ್ಕಾರಿ ದಾಖಲೆಗಳಲ್ಲಿ “ಅರಣ್ಯ” ಎಂಬುದನ್ನು ಒಳಗೊಂಡಿದ್ದು, (1)ರಲ್ಲಿ ಹೊರತುಪಡಿಸಿದ ಅರಣ್ಯಗಳು ಹಾಗೂ ನಿಘಂಟು ವ್ಯಾಖ್ಯಾನದಡಿ ಅರಣ್ಯ ಗುಣಲಕ್ಷಣಗಳುಳ್ಳ ಪರಿಭಾವಿತ ಅರಣ್ಯ ಪ್ರದೇಶಗಳು ಎಂದು ಅರಣ್ಯ ಭೂ ದಾಖಲೆಗಳನ್ನು ವಗೀಕರಿಸಬೇಕಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅರಣ್ಯ ಭೂಮಿಗಳನ್ನು ಗುರುತಿಸಿ ಕ್ರೂಢೀಕೃತ, ಏಕೀಕೃತ ದಾಖಲೆಗಳನ್ನು ವಗೀಕರಿಸಿ ಸಲ್ಲಿಸಲು ತಾಲ್ಲೂಕು ಮಟ್ಟದ ಜಂಟಿ ಪರಿಶೀಲನಾ ಸಮಿತಿಯನ್ನು ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳನ್ನು ರಚಿಸಲಾಗಿರುತ್ತದೆ ಎಂದು ತಿಳಿಸಿದ ಅವರು, ತಾಲ್ಲೂಕು ಮಟ್ಟದ ಜಂಟಿ ಪರಿಶೀಲನಾ ಸಮಿತಿ ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳು ನಿರ್ವಹಿಸಬೇಕಾದ ಕಾರ್ಯ ವಿಧಾನಗಳ ಕುರಿತು ಸಭೆಗೆ ವಿವರಿಸಿದರು.
ಸಭೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ, ತೋಟಗಾರಿಕೆ ಉಪನಿರ್ದೇಶಕ ಶರಣ ಬಸಪ್ಪ ಬೋಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ವಲಯ ಅರಣ್ಯಾಧಿಕಾರಿಗಳು ತಹಶೀಲ್ದಾರ್ಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಇದ್ದರು.