ಚಿತ್ರದುರ್ಗ: ಚಿಕ್ಕ ಕುಟುಂಬ ಚೊಕ್ಕ ಕುಟುಂಬ, ಚಿಕ್ಕ ಕುಟುಂಬದ ಆದರ್ಶ ಪಾಲಿಸಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಅಂಗನವಾಡಿ ‘ಡಿ’ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಅತ್ತೆ ಸೊಸೆಯರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಟುಂಬದ ಗಾತ್ರ ಚಿಕ್ಕದಿದ್ದರೆ ಮಕ್ಕಳಿಗೆ ಶಿಕ್ಷಣ, ಆರೋಗ್ಯ ನೀಡಬಹುದು. ಆದರೆ ಕುಟುಂಬದ ಗಾತ್ರ ಹೆಚ್ಚಿದಷ್ಟು ಶಿಕ್ಷಣದ ಕೊರತೆ, ಅನಾರೋಗ್ಯ ಸಮಸ್ಯೆಗಳು ಉಂಟಾಗಿ ಆರ್ಥಿಕ ಅಭಿವೃದ್ಧಿಗೆ ಧಕ್ಕೆ ಉಂಟಾಗುತ್ತದೆ. ಜನಸಂಖ್ಯಾ ನಿಯಂತ್ರಣಕ್ಕಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕುಟುಂಬ ಕಲ್ಯಾಣ ವಿಧಾನಗಳು ಉಚಿತವಾಗಿ ಲಭ್ಯವಿದ್ದು, ಇವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ. ಮಾತನಾಡಿ, ಗಂಡು ಹೆಣ್ಣು ಎಂಬ ಭೇದ ಬೇಡ. “ಮನೆಗೊಂದು ಮಗುವಿರಲಿ ಮನೆ ತುಂಬಾ ನಗುವಿರಲಿ” ಒಂದು ಬೇಕು ಎರಡು ಸಾಕು. ಒಂದು ಮಗುವಿನ ಜನನದ ನಂತರ ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕುಟುಂಬ ಕಲ್ಯಾಣ ಆಧುನಿಕ ತಾತ್ಕಾಲಿಕ ವಿಧಾನಗಳಾದ ಹೆಣ್ಣು ಮಕ್ಕಳಿಗೆ ಕಾಪರ್ಟಿ, ಡಿಂಪ ಇಂಜಕ್ಷನ್, ಛಾಯಾ ಮಾತ್ರೆಗಳು, ಪುರುಷರಿಗೆ ನಿರೋಧಗಳು ಹಾಗೂ ಎನ್ ಎಸ್ ವಿ ಹೊಲಿಗೆ ಇಲ್ಲದ, ಗಾಯ ಇಲ್ಲದ ಸರಳ ಶಾಶ್ವತ ವಿಧಾನ ಎನ್ ಎಸ್ ವಿ ಶಸ್ತ್ರ ಚಿಕಿತ್ಸೆ ಲಭ್ಯವಿದ್ದು, ಒಂದೆರಡು ಮಕ್ಕಳ ಜನನದ ನಂತರ ಮಕ್ಕಳು ಬೇಡವೆಂದು ದಂಪತಿಗಳು ನಿರ್ಧರಿಸಿದಾಗ ಕುಟುಂಬದಲ್ಲಿ ತಮ್ಮ ಪತಿಯವರಿಗೆ ಮನವೊಲಿಸಿ ಈ ಸರಳ ಶಸ್ತ್ರ ಚಿಕಿತ್ಸೆ ಮಾಡಿಸಬಹುದು. ಎನ್ ಎಸ್ ವಿ ಶಸ್ತ್ರಚಿಕಿತ್ಸೆಯಿಂದ ಪುರುಷತ್ವಕ್ಕೆ ಹಾನಿ ಇಲ್ಲ, ದಾಂಪತ್ಯ ಜೀವನಕ್ಕೆ ಅಡ್ಡಿಯಿಲ್ಲ, ಮೊದಲಿನಂತೆಯೇ ಸುಖಮಯ ದಾಂಪತ್ಯ ಜೀವನ ನಡೆಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಇತರೆ ಅಧಿಕಾರಿ ವೃಂದದವರು ಆಶಾ ಕಾರ್ಯಕರ್ತೆಯರು ಅಥವಾ 104ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.
ಮನೆಗೆ ಬಂದ ಸೊಸೆ ಬೇರೆಯಲ್ಲ ಮಗಳು ಬೇರೆಯಲ್ಲ, ಮನೆಯಲ್ಲಿ ಅತ್ತೆ ಸೊಸೆಯರು ಬಾಂಧವ್ಯದ ಬೆಸುಗೆಯನ್ನು ಗಟ್ಟಿ ಮಾಡಿಕೊಂಡು ಸಂತಸದ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಮಾತನಾಡಿ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ “ಬಾಲ್ಯ ವಿವಾಹ ಮಾಡಬೇಡಿರಿ. ಮನೆಯ ಮಗಳನ್ನು ಸಾವಿನ ದವಡೆಗೆ ದೂಡಬೇಡಿರಿ” ಹೆರಿಗೆ ಸಮಯದಲ್ಲಿ ಸಮಸ್ಯೆಗೆ ಸಿಲುಕಬೇಡಿರಿ. ಇಳಿಯ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಗರ್ಭಕೋಶದ ಬೆಳವಣಿಗೆ, ದೇಹದ ಬೆಳವಣಿಗೆ ತಾಯಿಯಾಗುವ ಬಯಕೆ ಇರುವುದಿಲ್ಲ. ಹೆರಿಗೆ ಸಮಯದಲ್ಲಿ ಕಡಿಮೆ ಹುಟ್ಟು ತೂಕದ ಮಗು ಜನನ, ಸತ್ತು ಹುಟ್ಟಿದ ಮಕ್ಕಳು, ತಾಯಿ ಮರಣ, ಶಿಶು ಮರಣ ಆಗುವ ಸಾಧ್ಯತೆ ಇರುವುದರಿಂದ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿರಿ ಎಂದರು.
ಬಾಲ್ಯ ವಿವಾಹ ಮಾಡುವುದು ಕಂಡು ಬಂದರೆ 1098ಕ್ಕೆ ಕರೆ ಮಾಡಿರಿ. ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಪವಿತ್ರ, ಸಮುದಾಯ ಆರೋಗ್ಯ ಅಧಿಕಾರಿ ರಶ್ಮಿ, ಆಶಾ ಕಾರ್ಯಕರ್ತೆಯರಾದ ಜ್ಯೋತಿಬಾಯಿ, ಕಾವೇರಿ, ಮಂಜುಳಾ, ರೂಪ, ಅಂಗನವಾಡಿ ಕಾರ್ಯಕರ್ತೆರಾದ ಚಂದ್ರಕಲಾ, ಸುಷ್ಮಾ ಹಾಗೂ ತಾಯಂದಿರು ಇದ್ದರು.