ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ಶಾಸಕರು ಯಾರು ಎಂಬ ವಿವರಗಳನ್ನುಇದೀಗ ನೀಡಲಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸ್ವಯಂ ಸೇವಾ ಸಂಸ್ಥೆ ಚುನಾವಣಾ ಸಂದರ್ಭದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ. ಎಡಿಆರ್ ವರದಿಯ ಪ್ರಕಾರ, ಮುಂಬೈನ ಘಾಟ್ಕೋಪರ್ ಪೂರ್ವದ ಬಿಜೆಪಿ ಶಾಸಕ ಪರಾಗ್ ಶಾ ಭಾರತದ ಅತ್ಯಂತ ಶ್ರೀಮಂತ ಶಾಸಕ. ಇವರ ಆಸ್ತಿಯ ಮೌಲ್ಯ ಸುಮಾರು 3400 ಕೋಟಿ ರೂ. ಅವರ ನಂತರದ ಸ್ಥಾನದಲ್ಲಿ ಕರ್ನಾಟಕದ ಕನಕಪುರದ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಇದ್ದಾರೆ. ಇವರ ಆಸ್ತಿ ಮೌಲ್ಯ 1,413 ಕೋಟಿ ರೂ.ಗಳಿಗಿಂತ ಹೆಚ್ಚು.
ಎಡಿಆರ್ ವರದಿಯು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸುತ್ತದೆ. 28 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 4092 ಶಾಸಕರ ಆಸ್ತಿ ಮೌಲ್ಯವನ್ನು ಇದು ವಿಶ್ಲೇಷಿಸಿದೆ. ಈ ವರದಿಯ ಪ್ರಕಾರ, ಬಿಜೆಪಿಯ ಪರಾಗ್ ಶಾ ಅತ್ಯಂತ ಶ್ರೀಮಂತ ಶಾಸಕರು. ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಧಾರಾ ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ. ಅವರ ಬಳಿ ಕೇವಲ 1700 ರೂಪಾಯಿಗಳ ಆಸ್ತಿ ಇದೆ. ನಿರ್ಮಲ್ ಕುಮಾರ್ ಧಾರಾ ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.
ಕರ್ನಾಟಕದ ಶಾಸಕರೇ ಅತಿ ಹೆಚ್ಚು!
ಕರ್ನಾಟಕದ ಶಾಸಕರು ಒಟ್ಟಾರೆಯಾಗಿ 14,179 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಇದು ದೇಶದಲ್ಲೇ ಅತಿ ಹೆಚ್ಚು. ಮಹಾರಾಷ್ಟ್ರ ಶಾಸಕರ ಆಸ್ತಿ 12,424 ಕೋಟಿ ರೂ. ಆಂಧ್ರಪ್ರದೇಶದ ಶಾಸಕರು 11,323 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ ರಾಜ್ಯಗಳಲ್ಲಿ ತ್ರಿಪುರ, ಮಣಿಪುರ ಮತ್ತು ಪುದುಚೇರಿ ಸೇರಿವೆ.
ತ್ರಿಪುರಾ ಶಾಸಕರು 90 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮಣಿಪುರ ಶಾಸಕರು 222 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪುದುಚೇರಿ ಶಾಸಕರು 297 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕರ್ನಾಟಕದ ಸ್ವತಂತ್ರ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಅವರ ಆಸ್ತಿ 1,267 ಕೋಟಿ ರೂ. ಕರ್ನಾಟಕದ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರ ಆಸ್ತಿ 1,156 ಕೋಟಿ ರೂ.