ಮುಂಬೈ: ತನ್ನ ವಿಚಿತ್ರ ಉಡುಗೆಗಳಿಂದಲೇ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಉರ್ಫಿ ಜಾವೆದ್ ಇದೀಗ ತನ್ನ ಮಾತುಗಳಿಂದಲೂ ಸುದ್ದಿಗೆ ಗ್ರಾಸವಾಗಿದ್ದಾರೆ. ತಾನೋರ್ವ ಮುಸ್ಲಿಂ ಮಹಿಳೆಯಾಗಿದ್ದರೂ, ತಾನು ಮಾತ್ರ ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ.. ತನಗೆ ಇಸ್ಲಾಂ ನಲ್ಲಿ ನಂಬಿಕೆಯೇ ಇಲ್ಲ ಎಂದು ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೆದ್ ಬೋಲ್ಡ್ ಹೇಳಿಕೆ ನೀಡಿದ್ದಾರೆ.
ಇಂಡಿಯಾ ಟುಡೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಉರ್ಫಿ ಜಾವೆದ್, ಇಸ್ಲಾಂ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮತ್ತು ತನ್ನದೇ ಮುಸ್ಲಿಂ ಸಮುದಾಯದಿಂದ ತಾನು ಎದುರಿಸುತ್ತಿರುವ ಟೀಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.”ನಾನು ಮುಸ್ಲಿಂ ಹುಡುಗಿ. ನನಗೆ ಬರುವ ಹೆಚ್ಚಿನ ದ್ವೇಷದ ಕಾಮೆಂಟ್‌ಗಳು ಮುಸ್ಲಿಂ ಜನರಿಂದ ಬಂದಿವೆ. ನಾನು ಇಸ್ಲಾಂನ ಪಾವಿತ್ರ್ಯಕ್ಕೆ ಕಳಂಕ ತರುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಬಯಸುತ್ತಾರೆ ಎಂಬ ಕಾರಣಕ್ಕಾಗಿ ಅವರು ನನ್ನನ್ನು ದ್ವೇಷಿಸುತ್ತಾರೆ. ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಅವರು ಬಯಸುತ್ತಾರೆ. ಈ ಕಾರಣದಿಂದಾಗಿ ನಾನು ಇಸ್ಲಾಂ ಅನ್ನು ನಂಬುವುದಿಲ್ಲ ಎಂದು ಉರ್ಫಿ ಹೇಳಿದ್ದಾರೆ.
ಇದೇ ವೇಳೆ ಅಂತರ್ಧರ್ಮೀಯ ಸಂಬಂಧಗಳ ಬಗ್ಗೆ ಕೇಳಿದಾಗ ಅದಕ್ಕೆ ಉತ್ತರಿಸಿದ, ಉರ್ಫಿ ತಾನು ಎಂದಿಗೂ ಮುಸ್ಲಿಂ ಪುರುಷನನ್ನು ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಎಂದಿಗೂ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ. ನಾನು ಇಸ್ಲಾಂನಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ನಾನು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ, ಆದ್ದರಿಂದ ನಾನು ಯಾರನ್ನು ಪ್ರೀತಿಸುತ್ತೇನೆ ಎಂಬುದು ನನಗೆ ಮುಖ್ಯವಲ್ಲ. ನಾವು ಯಾರನ್ನು ಬೇಕಾದರೂ ಮದುವೆಯಾಗಬಹುದು” ಎಂದು ಹೇಳಿದ್ದಾರೆ.
ಅಂತೆಯೇ ತನ್ನ ಕುಟುಂಬವು ತನ್ನ ಆಯ್ಕೆಗಳನ್ನು ಹೇಗೆ ಗೌರವಿಸುತ್ತದೆ ಎಂಬುದನ್ನು ವಿವರಿಸಿದ ಉರ್ಫಿ, “ನನ್ನ ತಾಯಿ ತುಂಬಾ ಧಾರ್ಮಿಕ ಮಹಿಳೆ, ಆದರೂ ಅವರು ಎಂದಿಗೂ ತನ್ನ ಧರ್ಮವನ್ನು ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರಿಲ್ಲ. ನನ್ನ ಒಡಹುಟ್ಟಿದವರು ಇಸ್ಲಾಂ ಅನ್ನು ಅನುಸರಿಸುತ್ತಾರೆ ಮತ್ತು ನಾನು ಅನುಸರಿಸುವುದಿಲ್ಲ, ಆದರೆ ಅವರು ಅದನ್ನು ಎಂದಿಗೂ ನನ್ನ ಮೇಲೆ ಹೇರಿಲ್ಲ. ನೀವು ನಿಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆ ನಿಮ್ಮ ಧರ್ಮವನ್ನು ಒತ್ತಾಯಪೂರ್ವಕವಾಗಿ ಹೇರಬಾರದು. ಅದು ಹೃದಯದಿಂದ ಬರಬೇಕು, ಇಲ್ಲದಿದ್ದರೆ ನೀವು ಅಥವಾ ಅಲ್ಲಾಹನು ಸಂತೋಷವಾಗಿರುವುದಿಲ್ಲ ಎಂದು ಉರ್ಫಿ ಹೇಳಿದ್ದಾರೆ.
ನನ್ನ ತಂದೆ ತುಂಬಾ ಸಂಪ್ರದಾಯವಾದಿ ವ್ಯಕ್ತಿ. ನಾನು 17 ವರ್ಷದವಳಾಗಿದ್ದಾಗ ಅವರು ನನ್ನನ್ನು ಮತ್ತು ನನ್ನ ಒಡಹುಟ್ಟಿದವರನ್ನು ನಮ್ಮ ತಾಯಿಯ ಬಳಿ ಬಿಟ್ಟು ಹೋದರು. ನಾನು ಈಗ ಭಗವದ್ಗೀತೆಯನ್ನು ಓದುತ್ತಿದ್ದೇನೆ. ನಾನು ಹಿಂದೂ ಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಉರ್ಫಿ ಜಾವೆದ್ ಹೇಳಿದ್ದಾರೆ.