ಬೆಂಗಳೂರು :ಆರ್ ಬಿಐ ನಿಯಮಾವಳಿ ಉಲ್ಲಂಘಿಸುವ ,ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದ್ದು, ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯದ ಜನರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿದರು.
ಅವರು ಇಂದು ಮೈಸೂರು ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸಧ್ಯದಲ್ಲಿಯೇ ಸುಗ್ರೀವಾಜ್ಞೆ. ಮೈಕ್ರೋ ಫೈನಾನ್ಸ್ ನಿಂದ ಜನರಿಗಾಗುತ್ತಿರುವ ತೊಂದರೆ ಹಾಗೂ ಬಿಜೆಪಿಯವರು ರಾಜ್ಯದಲ್ಲಿ ಗೂಂಡಾ ರಾಜ್ಯವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ. 28 ರಿಂದ 30 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಲಾಗಿದೆ.
ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ ನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್ ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಧ್ಯದಲ್ಲಿಯೇ ಸುಗ್ರೀವಾಜ್ಞೆಯನ್ನು ಹೊರಡಿಸಲಿದ್ದು, ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.