ಕೊಪ್ಪಳ: ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿರುವ ಪ್ರಸಿದ್ಧ ದೇವತೆ ಶ್ರೀ ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಆಭರಣ ಸಂಗ್ರಹವಾಗಿದೆ. ಕಳೆದ 44 ದಿನಗಳಲ್ಲಿ ದೇವಸ್ಥಾನದಲ್ಲಿ ಒಟ್ಟು 1.09 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಭಕ್ತರಿಂದ 90 ಗ್ರಾಂ ಬಂಗಾರ ಹಾಗೂ 4.70 ಕೆಜಿ ಬೆಳ್ಳಿ ಆಭರಣಗಳು ಸಮರ್ಪಣೆಯಾಗಿವೆ.
ಕಳೆದ ನವೆಂಬರ್ 24ರಂದು ನಡೆದ ಹಿಂದಿನ ಹುಂಡಿ ಎಣಿಕೆಯಲ್ಲಿ 87.26 ಲಕ್ಷ ರೂಪಾಯಿ ಸಂಗ್ರಹ ದಾಖಲಾಗಿತ್ತು. ಇದೀಗ ಹುಂಡಿ ಹಣ ಒಂದು ಕೋಟಿ ರೂಪಾಯಿ ಗಡಿ ದಾಟಿರುವುದು ವಿಶೇಷವಾಗಿದೆ. ಹುಲಿಗೆಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಪ್ರಕ್ರಿಯೆಯನ್ನು ಬಿಗಿ ಪೊಲೀಸ್ ಭದ್ರತೆ ಮತ್ತು ನಿಗಾದಲ್ಲಿ ನಡೆಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉಪಸ್ಥಿತಿಯಲ್ಲಿ ಪಾರದರ್ಶಕವಾಗಿ ಎಣಿಕೆ ಕಾರ್ಯ ಪೂರ್ಣಗೊಳಿಸಲಾಗಿದೆ.

































