ಭಾರತದಲ್ಲಿ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದು ಹಿಂದಿರುಗಿಸದೇ ವಿದೇಶಗಳಲ್ಲಿ ತಲೆಮರೆಸಿಕೊಂಡ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯ (ಇಡಿ) 22,280 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂತ್ರಸ್ತರಿಗೆ ಅಥವಾ ಹಕ್ಕುದಾರರಿಗೆ ಹಿಂದಿರುಗಿಸಿದೆ.
ಲೋಕಸಭೆಯಲ್ಲಿ 2024-25ನೇ ಸಾಲಿನ ಅನುದಾನಕ್ಕೆ ಪೂರಕ ಬೇಡಿಕೆಗಳ ಮೊದಲ ಹಂತದ ಚರ್ಚೆಗೆ ಪ್ರತಿಕ್ರಿಯಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಾಲ ಮರುಪಾವತಿ ಮಾಡದೇ ಓಡಿ ಹೋದವರ ಮತ್ತು ಬ್ಯಾಂಕ್‌ಗಳಿಗೆ ವಂಚಿಸಿದವರ ಆಸ್ತಿ ಮುಟ್ಟುಗೋಲು ಹಾಕಿ ಎಷ್ಟು ಹಣ ವಶಪಡಿಸಲಾಯಿತು ಎಂಬ ವಿವರ ನೀಡಿದರು. ವಿಜಯ್ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ ನೀರವ್ ಮೋದಿ ಅವರ 1,052.58 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಮೆಹಲ್ ಚೋಕ್ಸಿ ಮತ್ತು ಇತರರು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸಿದ್ದು, ಅವರ 2,565.90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಹರಾಜು ಮಾಡಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ (ಎನ್‌ಎಸ್‌ಇಎಲ್) ಪ್ರಕರಣದಲ್ಲಿ 17.47 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಂಚನೆಗೆ ಒಳಗಾದ ನಿಜವಾದ ಹೂಡಿಕೆದಾರರಿಗೆ ಹಿಂತಿರುಗಿಸಲಾಗಿದೆ ಎಂದು ಹೇಳಿದರು.