ನವದೆಹಲಿ : ಇಂದಿನ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಬ್ಯಾಂಕಿಂಗ್, ಸಾಮಾಜಿಕ ಜಾಲತಾಣ, ಸುದ್ದಿಗಳು, ಖರೀದಿ ಎಲ್ಲವೂ ಒಂದೇ ಫೋನ್‌ನಲ್ಲಿ ಸಿಗುವ ಸಂದರ್ಭದಲ್ಲಿ, ಅದು ಕಳೆದುಹೋದರೆ ಅಥವಾ ಕಳುವಾದರೆ ದೊಡ್ಡ ತೊಂದರೆಯೇ ಸರಿ. ನಿಮ್ಮ ವೈಯಕ್ತಿಕ ಮಾಹಿತಿಯೂ ಅಪಾಯಕ್ಕೆ ಒಳಗಾಗುತ್ತದೆ. ಆದರೆ ಇಂತಹ ಸಂದರ್ಭಗಳಲ್ಲಿ ಪೊಲೀಸರು ನಿಮ್ಮ ಫೋನ್ ಪತ್ತೆಹಚ್ಚಲು ಶಕ್ತಿಶಾಲಿ ತಾಂತ್ರಿಕ ವಿಧಾನಗಳನ್ನು ಬಳಸುತ್ತಾರೆ.
ಪ್ರತಿಯೊಂದು ಮೊಬೈಲ್‌ಗೂ ವಿಶಿಷ್ಟ IMEI ಸಂಖ್ಯೆ ಇರುತ್ತದೆ. ಈ ಸಂಖ್ಯೆ ಮೂಲಕ ಫೋನ್ ಎಲ್ಲಿ ಸಕ್ರಿಯವಾಗಿದೆ, ಯಾವ ನೆಟ್ವರ್ಕ್ ಟವರ್‌ನ ಸಿಗ್ನಲ್ ಪಡೆಯುತ್ತಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಾರೆ. ಮೊಬೈಲ್‌ನಲ್ಲಿ ಬಳಸಲಾಗಿರುವ ಸಿಮ್ ಕಾರ್ಡ್ ಯಾವ ಟವರ್‌ಗೆ ಸಂಪರ್ಕ ಹೊಂದಿದೆ ಎಂಬುದರ ಆಧಾರದ ಮೇಲೆ ಫೋನ್‌ನ ಸ್ಥಳವನ್ನು ಊಹಿಸಲಾಗುತ್ತದೆ. ಫೋನ್‌ನಲ್ಲಿ ಇರುವ GPS ವ್ಯವಸ್ಥೆಯು ಆನ್ ಆಗಿದ್ದರೆ, ಅದರ ಮೂಲಕ ನಿಖರವಾದ ಸ್ಥಳವನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭವಾಗುತ್ತದೆ.
ನೀವು ಗೂಗಲ್ ಖಾತೆಯನ್ನು ಫೋನ್‌ಗೆ ಲಾಗಿನ್ ಮಾಡಿದ್ದರೆ, “Find My Device” ಸೇವೆಯ ಮೂಲಕ ಫೋನ್‌ನ ತಾಜಾ ಸ್ಥಳವನ್ನು ಕಂಡುಹಿಡಿಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಫೋನ್‌ನಲ್ಲಿ ಇರುವ ಸಾಮಾಜಿಕ ಜಾಲತಾಣ ಅಪ್ಲಿಕೇಶನ್‌ಗಳು, ಕರೆಯ ವಿವರಗಳು ಮತ್ತು ಸಂದೇಶಗಳ ಮಾಹಿತಿ ಸಹ ಪೊಲೀಸರಿಗೆ ಸಹಾಯಕವಾಗುತ್ತದೆ.
ಮೊಬೈಲ್ ಕಳುವಾದ ಸಂದರ್ಭದಲ್ಲಿ ಸರ್ಕಾರದ ಸಂಚಾರ್ ಸಾಥಿ ಆಪ್ ಮೂಲಕ ಫೋನ್ ಅನ್ನು ತಕ್ಷಣ ಬ್ಲಾಕ್ ಮಾಡಬಹುದು. ಆ್ಯಪ್‌ನಲ್ಲಿ “ಕಳೆದುಹೋಗಿದೆ/ಕದ್ದಿದೆ” ಎಂದು ಗುರುತಿಸಿದ ಕ್ಷಣ ದೇಶದ ಎಲ್ಲ ಟೆಲಿಕಾಂ ಕಂಪನಿಗಳು ಆ IMEI ಸಂಖ್ಯೆಯನ್ನು ನಿರ್ಬಂಧಿಸುತ್ತವೆ. ಇದರಿಂದ ಯಾರೂ ಹೊಸ ಸಿಮ್ ಹಾಕಿ ಆ ಫೋನ್ ಅನ್ನು ಬಳಕೆ ಮಾಡುವುದು ಸಾಧ್ಯವಾಗುವುದಿಲ್ಲ.
ಫೋನ್ ಕಳುವಾದರೂ ಆತಂಕಪಡಬೇಕಾಗಿಲ್ಲ. ತಕ್ಷಣ FIR ನೀಡುವುದು, ಸಂಚಾರ್ ಸಾಥಿ ಆಪ್ ಮೂಲಕ IMEI ಬ್ಲಾಕ್ ಮಾಡುವುದು ಮತ್ತು ಗೂಗಲ್ Find My Device ಸಕ್ರಿಯವಾಗಿರುವುದು ನಿಮ್ಮ ಫೋನ್ ಪತ್ತೆಗೆ ದೊಡ್ಡ ಸಹಾಯವಾಗಲಿದೆ.






























