ಭಾರತೀಯ ಸಂಸ್ಕೃತಿ ಪ್ರಕಾರ ಗಂಗಾ ನದಿಗೆ ವಿಶೇಷ ಸ್ಥಾನವಿದೆ. ಗಂಗೆಯನ್ನು ಭಾರತೀಯರು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ತಾಯಿಯ ಸ್ಥಾನದಲ್ಲಿರಿಸು ಗಂಗೆಯನ್ನು ಪೂಜಿಸುತ್ತಾರೆ. ಕಾಶಿಗೆ ಹೋದವರು ಬರಿಗೈಯಲ್ಲಿ ಬರುವ ಕ್ರಮವಿಲ್ಲ. ಗಂಗಾ ಜಲವನ್ನು ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುವುದಲ್ಲದೆ ತಮ್ಮ ಆಪ್ತರಿಗೆ ಇದನ್ನು ಹಂಚುತ್ತಾರೆ. ಗಂಗೆಯನ್ನು ಹೀಗೆ ಹಂಚಿದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ನೀವು ಗಂಗಾಜಲವನ್ನು ಎಲ್ಲಿ, ಹೇಗೇ ಇಟ್ಟರೂ ಅನೇಕ ವರ್ಷ ಅದು ಕೆಡುವುದಿಲ್ಲ. ಬೇರೆ ನೀರುಗಳನ್ನು ನೀವು ತುಂಬಾ ಸಮಯ ಇಡಲು ಸಾಧ್ಯವಿಲ್ಲ. ಆದರೆ ಗಂಗಾಜಲ ಮಾತ್ರ ಶುದ್ಧವಾಗಿಯೇ ಇರಲು ಕಾರಣ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.
ಗಂಗಾಜಲದ ಶುದ್ಧತೆಯ ಹಿಂದೆ ಕೆಲವಾರು ವೈಜ್ಞಾನಿಕ ಕಾರಣಗಳು ಅಡಕವಾಗಿವೆ. ಈ ನೀರು ಕೆಡದಂತೆ ಸಹಾಯ ಮಾಡುವ ಪ್ರಮುಖ ಅಂಶವೆಂದರೆ ಬ್ಯಾಕ್ಟೀರಿಯೊಫೇಜ್. ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯ ಪ್ರಕಾರ, ಗಂಗಾ ನದಿಯ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯೊಫೇಜ್ ಗಳು ವಿಶೇಷ ರೀತಿಯ ವೈರಸ್ ಗಳಾಗಿವೆ. ಇದು ನೀರಿನಲ್ಲಿ ಇರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಈ ಬ್ಯಾಕ್ಟೀರಿಯೊಫೇಜ್‌ಗಳು ಗಂಗಾ ನೀರಿನಲ್ಲಿ ನೈಸರ್ಗಿಕ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತವೆ. ಇವು ನೀರನ್ನು ಶುದ್ಧ ಮತ್ತು ಸುರಕ್ಷಿತವಾಗಿಡುತ್ತವೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ವರದಿಯ ಪ್ರಕಾರ, ಬೇರೆ ನದಿಗಳಿಗಿಂತ ಗಂಗಾ ನದಿಯ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕವಿದೆ. ಆಮ್ಲಜನಕದ ಈ ಸಮೃದ್ಧಿಯಿಂದಾಗಿಯೇ ನೀರಿನ ಗುಣಮಟ್ಟವು ದೀರ್ಘಕಾಲ ಕೆಡದಂತೆ ಉಳಿಯುತ್ತದೆ. ಇದು ನೀರು ಹಾಳಾಗುವುದನ್ನು ತಡೆಯುತ್ತದೆ. ಆಮ್ಲಜನಕ ಹೆಚ್ಚಿರುವ ಕಾರಣ ನೀರು ಕೆಟ್ಟ ವಾಸನೆ ಬಠರದಂತೆ ತಡೆಯುತ್ತದೆ. ಈ ಅಧಿಕ ಆಮ್ಲಜನಕವು ಗಂಗಾ ನದಿಯ ಮೇಲ್ಭಾಗದಿಂದ ಕೆಳಗಿನ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಂದ್ರೆ ಹರಿದ್ವಾರ ಮತ್ತು ಋಷಿಕೇಶದಂತಹ ಸ್ಥಳಗಳಲ್ಲಿ ಹೆಚ್ಚು ಕಂಡುಬರುತ್ತದೆ. ಅದೇ ಕಾರಣಕ್ಕೆ ಈ ಸ್ಥಳಗಳ ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ವೈಜ್ಞಾನಿಕ ಕಾರಣಗಳ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳೂ ಇದಕ್ಕಿದೆ. ಹಿಂದೂ ಧರ್ಮದಲ್ಲಿ, ಗಂಗಾ ನದಿಯನ್ನು ದೇವತೆಯ ರೂಪವೆಂದು ಪರಿಗಣಿಸಲಾಗುತ್ತದೆ. ಗಂಗಾಜಲದಲ್ಲಿ ಸ್ನಾನ ಮಾಡುವುದಲ್ಲದೆ ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಪಾಪ ನಾಶವಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಗಂಗಾ ನೀರನ್ನು ಇಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಗಂಗಾಜಲವನ್ನು ಪೂಜೆ, ಯಾಗ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ವ್ಯಕ್ತಿಯೊಬ್ಬ ಕೊನೆಯುಸಿರೆಳೆಯುತ್ತಿರುವ ಸಮಯದಲ್ಲಿ ಆತನ ಬಾಯಿಗೆ ಗಂಗಾಜಲ ಬಿಟ್ಟರೆ ಮುಕ್ತಿ ಸಿಗುತ್ತದೆ ಎಂದು ಬಲವಾಗಿ ನಂಬಲಾಗಿದೆ.
ಗಂಗಾಜಲವನ್ನು ಮನೆಯಲ್ಲಿ ದೀರ್ಘಕಾಲ ಇಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ನೈಸರ್ಗಿಕವಾಗಿ ಶುದ್ಧವಾಗಿದೆ. ಆದ್ದರಿಂದ ಬ್ಯಾಕ್ಟೀರಿಯಾ ಅಥವಾ ಇತರ ಸೂಕ್ಷ್ಮಜೀವಿಗಳು ಅದರಲ್ಲಿ ಬೆಳೆಯಲು ಸಾಧ್ಯವಿಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಗಂಗಾಜಲವನ್ನು ಇಡುವುದರಿಂದ ಧನಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ. ಇದು ವಾತಾವರಣವನ್ನು ಪವಿತ್ರ ಮತ್ತು ಶಾಂತಿಯುತವಾಗಿರಿಸುತ್ತದೆ. ಇದು ಆರೋಗ್ಯಕ್ಕೂ ಪ್ರಯೋಜನಕಾರಿ. ಪ್ರಾಚೀನ ಕಾಲದಲ್ಲಿ, ಗಂಗಾಜಲವನ್ನು ಔಷಧಿಯಾಗಿ ಬಳಸಲಾಗುತ್ತಿತ್ತು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ.
 
				 
         
         
         
															 
                     
                     
                     
                     
                    


































 
    
    
        