ವಾಷಿಂಗ್ಟನ್: ಭಾರತ ಇನ್ಮುಂದೆ ತೈಲ ಖರೀದಿಸುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಇದು ಒಳ್ಳೆಯ ಹೆಜ್ಜೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನ ಸ್ವಾಗತಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಅಂತ ನಾನು ಕೇಳಿದ್ದೇನೆ. ಆದ್ರೆ ಅದು ನಿಜವೋ, ಸುಳ್ಳೋ ನನಗೆ ತಿಳಿದಿಲ್ಲ. ಒಂದು ವೇಳೆ ಅದು ನಿಜವಾದಲ್ಲಿ ಒಳ್ಳೆಯ ಹೆಜ್ಜೆ. ಮುಂದೆ ಏನಾಗುತ್ತದೆ ಕಾದು ನೋಡೋಣ. ಈ ಸುದ್ದಿ ಎಷ್ಟು ನಿಖರವಾಗಿದೆ ಅನ್ನೋದ್ರ ಬಗ್ಗೆ ನಮ್ಮ ಬಳಿ ಸರಿಯಾದ ಮಾಹಿತಿ ಇಲ್ಲ” ಎಂದಿದ್ದಾರೆ.
ಭಾರತವು ವಿಶ್ವದ 3ನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾಗಿದೆ. 2022ರಿಂದ ಪಾಶ್ಚಿಮಾತ್ಯ ನಿರ್ಬಂಧಗಳ ನಂತರ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಆದರೆ ಇತ್ತೀಚಿನ ಕೆಲ ವರದಿಗಳ ಪ್ರಕಾರ, ಭಾರತದ ಸರ್ಕಾರಿ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿಸುವುದನ್ನೇ ನಿಲ್ಲಿಸಿವೆ. ರಷ್ಯಾ ನೀಡುತ್ತಿದ್ದ ರಿಯಾಯಿತಿಗಳಲ್ಲಿ ಕಡಿತಗೊಂಡಿರುವುದು ಹಾಗೂ ಸರಕು ಸಾಗಣೆಗೆ ಎದುರಾಗಿರುವ ಸಮಸ್ಯೆಗಳೇ ಕಾರಣ. ಈ ಕಾರಣದಿಂದ ಭಾರತ ತೈಲ ಖರೀದಿಯನ್ನ ಸದ್ಯಕ್ಕೆ ನಿಲ್ಲಿಸಿವೆ ಎನ್ನಲಾಗಿದೆ.
ಆಗಸ್ಟ್ 7ರಿಂದ ಅನ್ವಯವಾಗುವಂತೆ ಭಾರತ ಸೇರಿ 69 ದೇಶಗಳಿಗೆ ಸುಂಕ ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದರು. ಈ ಬೆನ್ನಲ್ಲೇ ಭಾರತ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನೇ ನಿಲ್ಲಿಸಬಹುದು ಎಂಬ ವದಂತಿ ಹಬ್ಬಿದೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತ ಮತ್ತು ರಷ್ಯಾ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸ್ಥಿರವಾಗಿದೆ. ಪ್ರಸ್ತುತ ಉದ್ವಿಗ್ನತೆಯ ಹೊರತಾಗಿಯೂ, ಎರಡೂ ದೇಶಗಳ ನಡುವಿನ ಸಂಬಂಧ ಮುಂದುವರಿಯುತ್ತದೆ” ಎಂದು ತಿಳಿಸಿದರು.