ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಪತ್ನಿ, ಅಮೇರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಹುಟ್ಟೂರು ಸ್ಲೊವೇನಿಯಾದ ಸೆವ್ನಿಕಾದಲ್ಲಿದ್ದ ಅವರ ಕಂಚಿನ ಪ್ರತಿಮೆ ಕಣ್ಮರೆಯಾಗಿದೆ. ಈ ಶಿಲ್ಪವನ್ನು 2020 ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅನಾವರಣಗೊಳಿಸಿದ್ದರು.
ಪ್ರತಿಮೆಯನ್ನು ಕಣಕಾಲುಗಳ ಬಳಿ ಕತ್ತರಿಸಿ ಮಂಗಳವಾರ ಅಪರಿಚಿತ ವ್ಯಕ್ತಿಗಳು ಹೊತ್ತೊಯ್ದಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮತ್ತು ಆರೋಪಿಗಳನ್ನು ಪತ್ತೆಹಚ್ಚುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಪೂರ್ವ ಸ್ಲೊವೇನಿಯಾದ ಕೆಲವು ನಿವಾಸಿಗಳು ಇದನ್ನು ಧ್ವಂಸಗೊಳಿಸಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಹಣಕ್ಕಾಗಿ ಅದನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ.
ಈ ಕಂಚಿನ ಪ್ರತಿಮೆಯು 2020 ರಲ್ಲಿ ಬೆಂಕಿಗೆ ಆಹುತಿಯಾದ ಮರದ ಪ್ರತಿಮೆಯ ಬದಲಿಯಾಗಿದೆ. ಅಲೆಕ್ಸ್ ಮ್ಯಾಕ್ಸಿ ಜುಪೆವ್ಕ್ ಮರದ ರಚನೆಯನ್ನು ರಚಿಸಿದ್ದು, ಇದು 2017 ರ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಪದಗ್ರಹಣ ಸಮಾರಂಭದಲ್ಲಿ ಅವರು ಧರಿಸಿದ್ದಂತಹ ಮಸುಕಾದ ನೀಲಿ ಬಣ್ಣದ ಉಡುಪನ್ನು ಧರಿಸಿರುವುದನ್ನು ಹೋಲುತ್ತಿತ್ತು. ಪ್ರತಿಮೆಯ ಶಿಲ್ಪಿ ಬ್ರಾಡ್ ಡೌನಿ, ಅದರ ಕಳ್ಳತನದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.