ವಾಷಿಂಗ್ಟನ್: ‘ಭಾರತದ ಮೇಲೆ ಪ್ರತಿ ದಾಳಿ ಮಾಡುವ ಆಲೋಚನೆಯನ್ನು ಕೂಡ ಮಾಡಬೇಡಿ’ ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
ಭಾರತವು ಆಪರೇಷನ್ ಸಿಂಧೂರ್ ಮೂಲಕ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಈ ಮಧ್ಯೆ ಅಮೆರಿಕ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, ಭಾರತದ ಮಿಲಿಟರಿ ಕ್ರಮಕ್ಕೆ ಪಾಕಿಸ್ತಾನ ಪ್ರತಿಕ್ರಿಯಿಸುವ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಯಾವುದೇ ಪ್ರತಿಕ್ರಿಯೆಯು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ ಸಂಯಮವನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಎಚ್ಚರಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ ಮತ್ತು ಈ ವಿಷಯದಲ್ಲಿ ಪಾಕಿಸ್ತಾನ ಏನನ್ನೂ ಮಾಡಲು ಧೈರ್ಯ ಮಾಡಬಾರದು. ಭಾರತ-ಪಾಕಿಸ್ತಾನದ ಪರಿಸ್ಥಿತಿಯನ್ನು ಅಮೆರಿಕ ಗಮನಿಸುತ್ತಿದೆ ಮತ್ತು ಈ ಉದ್ವಿಗ್ನತೆ ಶೀಘ್ರದಲ್ಲೇ ಶಾಂತಿಯುತವಾಗಿ ಬಗೆಹರಿಯುತ್ತದೆ ಎಂದು ಆಶಿಸುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.