ಬೆಂಗಳೂರು : ಹೆಚ್.ಎಂ.ಪಿ. ವೈರಸ್ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಆರೋಗ್ಯ ಇಲಾಖೆಯವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಗಾಂಧಿಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಎಂ.ಪಿ.ವಿ ಬಗ್ಗೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದು ಆತಂಕಾರಿಯಾದ ವೈರಸ್ ಅಲ್ಲ ಹಾಗೂ ಅದು ಚೀನಾದಿಂದ ಬಂದಿಲ್ಲ. 2001 ರಿಂದಲೇ ಈ ವೈರಸ್ ಪತ್ತೆಯಾಗಿದ್ದು, ಎಚ್.ಎಂ.ಪಿ ವೈರಸ್ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಾಗಿ ತಗಲುತ್ತದೆ. ಆದರೆ ಅದು ಅಪಾಯಕಾರಿಯಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಿದರು.
ಗೃಹ ಸಚಿವ ಜಿ.ಪರಮೇಶ್ವರ ಅವರು ಏರ್ಪಡಿಸಿದ್ದ ಔತಣಕೂಟ ರದ್ದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಔತಣ ಕೂಟ ಕರೆದಿರುವುದಾಗಲಿ ಅಥವಾ ರದ್ದಾಗಿರುವುದಾಗಲಿ ನನಗೆ ತಿಳಿದಿಲ್ಲ. ಅವರೊಂದಿಗೆ ಮಾತನಾಡುವೆ ಎಂದರು.