ಚಿತ್ರದುರ್ಗ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಏಕ ಸದಸ್ಯ ಪಡಿತರ ಚೀಟಿದಾರರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಿಸುವ ಕಾರ್ಯಕ್ರಮ ಪ್ರಾರಂಭಿಸಿದೆ.
ಮುಖ್ಯಮಂತ್ರಿಯವರು ಕಳೆದ ಬಜೆಟ್ನಲ್ಲಿ, 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಏಕ ಸದಸ್ಯ ಪಡಿತರ ಚೀಟಿದಾರರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಿಸುವಂತೆ ಘೋಷಿಸಿರುತ್ತಾರೆ. ಅದರನ್ವಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಜನವರಿ-2026ರ ಅನ್ನಸುವಿಧ ಮಾಡ್ಯುಲ್ನಲ್ಲಿ ಇ.ಕೆ.ವೈ.ಸಿಯಾದ ಒಟ್ಟು 6,336 ಏಕ ಸದಸ್ಯ ಪಡಿತರ ಚೀಟಿದಾರರ ¥ಟ್ಟಿ ಆಯಾ ನ್ಯಾಯಬೆಲೆ ಅಂಗಡಿ ಲಾಗಿನ್ನಲ್ಲಿ ಲಭ್ಯವಿದ್ದು, “ಅನ್ನ ಸುವಿಧ” ಯೋಜನೆಯಡಿ ಅವರ ಮನೆಯ ಬಾಗಿಲಿಗೆ ಪಡಿತರ ಧಾನ್ಯ ತಲುಪಿಸುವ ಕಾರ್ಯ ಪ್ರಾರಂಭಿಸಿದೆ.
ಜನವರಿ-2026ರ ಅನ್ನಸುವಿಧ ಮಾಡ್ಯುಲ್ನಲ್ಲಿ ಇಕೆವೈಸಿಯಾದ ಶೇ.75ಕ್ಕಿಂತ ಹೆಚ್ಚಿನ ವಯಸ್ಸಿನ ಏಕ ಸದಸ್ಯ ಹಿರಿಯ ನಾಗರಿಕರ ತಾಲ್ಲೂಕುವಾರು ವಿವರ ಇಂತಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 123 ನ್ಯಾಯಬೆಲೆ ಅಂಗಡಿಗಳು, 1,517 ಪಡಿತರ ಚೀಟಿಗಳು ಇವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 151 ನ್ಯಾಯಬೆಲೆ ಅಂಗಡಿಗಳು, 1,127 ಪಡಿತರ ಚೀಟಿಗಳು ಇವೆ. ಹಿರಿಯೂರು ತಾಲ್ಲೂಕಿನಲ್ಲಿ 92 ನ್ಯಾಯಬೆಲೆ ಅಂಗಡಿಗಳು, 1,467 ಪಡಿತರ ಚೀಟಿಗಳು ಇವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 96 ನ್ಯಾಯಬೆಲೆ ಅಂಗಡಿಗಳು, 869 ಪಡಿತರ ಚೀಟಿಗಳು ಇವೆ. ಹೊಸದುರ್ಗ ತಾಲ್ಲೂಕಿನಲ್ಲಿ 110 ನ್ಯಾಯಬೆಲೆ ಅಂಗಡಿಗಳು, 921 ಪಡಿತರ ಚೀಟಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 50 ನ್ಯಾಯಬೆಲೆ ಅಂಗಡಿಗಳು, 435 ಪಡಿತರ ಚೀಟಿಗಳು ಇವೆ.
ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು 01 ರಿಂದ 05 ರೊಳಗಾಗಿ ಪಡಿತರ ಚೀಟಿದಾರರ ಸಮ್ಮತಿಯನ್ನು ಓ.ಟಿ.ಪಿ ಮುಖಾಂತರ ಪಡೆಯಬೇಕು. ನಂತರ ದಿನಾಂಕ 06 ರಿಂದ 15 ರೊಳಗೆ ದಿನಾಂಕವನ್ನು ನಿಗಧಿಪಡಿಸಿ, ನಿಗಧಿಪಡಿಸಿದ ದಿನದಂತೆ ಓ.ಟಿ.ಪಿ ಮತ್ತು ಬಯೋಮೆಟ್ರಿಕ್ ಪಡೆದು, ನ್ಯಾಯಬೆಲೆ ಅಂಗಡಿ ಮಾಲೀಕರು 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮನೆಯ ಬಾಗಿಲಿಗೆ ಪಡಿತರವನ್ನು ವಿತರಿಸುತ್ತಿರುತ್ತಾರೆ.
ಆದರೆ ಪ್ರಸ್ತುತ ಪಡಿತರ ಚೀಟಿದಾರರಿಗೆ ಅನುಕೂಲವಾಗುವ ಸಲುವಾಗಿ ಪ್ರತಿ ಮಾಹೆ ಮೊದಲನೇಯ ದಿನಾಂಕದಿಂದ ಮಾಹೆಯ ಕೊನೆಯ ದಿನಾಂಕದವರೆಗೂ ನ್ಯಾಯಬೆಲೆ ಅಂಗಡಿ ಮಾಲೀಕರ ಲಾಗಿನ್ನಲ್ಲಿ ಪಡಿತರ ಚೀಟಿದಾರರ ಸಮ್ಮತಿಯನ್ನು ಓ.ಟಿ.ಪಿ.ಮುಖಾಂತರ ಪಡೆದು, ನಂತರ ದಿನಾಂಕವನ್ನು ನಿಗದಿಪಡಿಸಿ, ಓಟಿಪಿ ಮತ್ತು ಬಯೋಮೆಟ್ರಿಕ್ ಪಡೆದು, ನ್ಯಾಯಬೆಲೆ ಅಂಗಡಿ ಮಾಲೀಕರು ಶೇ.75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರ ಮನೆಯ ಬಾಗಿಲಿಗೆ ಪಡಿತರ ಆಹಾರಧಾನ್ಯವನ್ನು ವಿತರಿಸಲು ಅವಕಾಶ ಕಲ್ಪಿಸಲಾಗಿದೆ.
75ಕ್ಕಿಂತ ಹೆಚ್ಚಿನ ವಯಸ್ಸಿನ ಏಕ (ಒಬ್ಬ) ಸದಸ್ಯ ಹಿರಿಯ ನಾಗರಿಕರು ಪಡಿತರವನ್ನು ತಮ್ಮ ಮನೆಯ ಬಾಗಿಲಿಗೆ ಪಡೆದು “ಅನ್ನಸುವಿಧ” ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






























