ಬೆಂಗಳೂರು : ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಕಾಲೇಜೊಂದರ ಕಾರ್ಯಕ್ರದಲ್ಲಿ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಗಾಯಕ ಸೋನು ನಿಗಮ್ಗೆ ಒಂದೇ ದಿನ ಡಬಲ್ ಶಾಕ್ ದೊರೆತಿದೆ.
ಹೌದು ಕನ್ನಡದ ಬಗ್ಗೆ ಸೋನು ನಿಗಮ್ ನೀಡಿದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರಿಗೆ ನೋಟಿಸ್ ಜಾರಿ ಆಗಿದೆ. ಜೊತೆಗೆ ಅವರಿಂದ ಕನ್ನಡ ಹಾಡುಗಳನ್ನು ಹಾಡಿಸದಿರಲು ಕರ್ನಾಟಕ ಫಿಲ್ಮ್ ಚೇಂಬರ್ ನಿರ್ಧರಿಸಿದೆ.
‘ಕನ್ನಡ ಕನ್ನಡ.. ಹೀಗೆ ಹೇಳಿದ್ದರಿಂದಲೇ ಪಹಲ್ಗಾಮ್ ದಾಳಿ ಆಯಿತು’ ಎಂದು ಹೇಳಿಕೆ ನೀಡುವ ಮೂಲಕ ಸೋನು ನಿಗಮ್ ಅನಾವಶ್ಯಕವಾಗಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಆದರೆ ಆ ಬಳಿಕ ಅವರು ಹೇಳಿಕೆಗೆ ಸ್ಪಷ್ಟನೆ ಕೊಟ್ಟರೇ ಹೊರತು ಕನ್ನಡಿಗರ ಬಳಿ ಕ್ಷಮೆಯಾಚಿಸಿಲ್ಲ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಫಿಲ್ಮ್ ಚೇಂಬರ್ ಅವರಿಗೆ ಅವಕಾಶ ನೀಡದಿರಲು ತೀರ್ಮಾನಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ‘ಘಟನೆ ಬಳಿಕ ಈವರೆಗೂ ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮೆ ಕೇಳಿಲ್ಲ. ಇನ್ನು ಮುಂದೆ ಸೋನು ನಿಗಮ್ ಅವರಿಂದ ಚಿತ್ರರಂಗದವರು ಮ್ಯೂಸಿಕಲ್ ನೈಟ್ಸ್ ಮಾಡುವುದಿಲ್ಲ. ಅವರ ಬಳಿ ಹಾಡನ್ನು ಹಾಡಿಸೋದಿಲ್ಲ. ಈ ಕ್ಷಣದಿಂದಲೇ ಸೋನುಗೆ ಅಸಹಕಾರ ತೋರಬೇಕೆಂದು ನಿರ್ಧಾರ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಇನ್ನು ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆವಲಹಳ್ಳಿ ಠಾಣೆ ಪೊಲೀಸರು ಸೋನು ನಿಗಮ್ಗೆ ನೋಟಿಸ್ ನೀಡಿದ್ದಾರೆ. ಇಮೇಲ್ ಹಾಗೂ ಪೋಸ್ಟ್ ಮೂಲಕ ಸೋನುಗೆ ನೋಟಿಸ್ ಕಳುಹಿಸಲಾಗಿದ್ದು, ಈ ನೋಟಿಸ್ ತಲುಪಿದ ಒಂದು ವಾರದೊಳಗಡೆ ವಿವರಣೆ ನೀಡಲು ಸೂಚಿಸಲಾಗಿದೆ.