ಬೆಂಗಳೂರು :ಜನ ಈಗ ಕಾಂಗ್ರೆಸ್ಸನ್ನು ಧಿಕ್ಕರಿಸಿದ್ದಾರೆ. ಆದ್ದರಿಂದ ಅವರಿಗೆ ಈಗ ಪಾಪ.., ಡಾ. ಬಾಬಾಸಾಹೇಬ ಅಂಬೇಡ್ಕರರ ನೆನಪಾಗುತ್ತಿದೆ. ಡಾ. ಬಾಬಾಸಾಹೇಬರು ಸಂವಿಧಾನಶಿಲ್ಪಿ ಎಂದು ಈಗ ನೆನಪಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಸಂವಿಧಾನ ಕೊಟ್ಟ ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ಕಾಂಗ್ರೆಸ್‍ನವರು ಹೇಗೆ ನಡೆಸಿಕೊಂಡರು ಎಂಬ ಸತ್ಯ ರಾಜ್ಯ ಮತ್ತು ದೇಶದ ಜನತೆಗೆ ಗೊತ್ತಾಗಬೇಕಿದೆ ಎಂದು ತಿಳಿಸಿದರು.
ಭಾರತದ ನಿಜವಾದ ರತ್ನವಾಗಿದ್ದ ಬಾಬಾಸಾಹೇಬ ಅಂಬೇಡ್ಕರರಿಗೆ ಭಾರತರತ್ನ ಕೊಡಲು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಬೆಂಬಲಿಸಿದ ವಿ.ಪಿ.ಸಿಂಗ್ ಅವರ ಸರಕಾರವೇ ಬರಬೇಕಾಯಿತಲ್ಲವೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‍ನವರು ಸ್ವಾತಂತ್ರ್ಯದ ನಂತರದಲ್ಲಿ 50-55 ವರ್ಷಗಳ ಕಾಲ ಸುದೀರ್ಘವಾಗಿ ಆಡಳಿತ ನಡೆಸಿದ್ದಾರೆ. 40-45 ವರ್ಷಗಳ ಕಾಲ ಸುದೀರ್ಘವಾಗಿ ಗಾಂಧಿ ಕುಟುಂಬವೇ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಸಹ ಮಹಾನ್ ನಾಯಕ ಬಾಬಾಸಾಹೇಬ ಅಂಬೇಡ್ಕರರಿಗೆ ಭಾರತರತ್ನ ಕೊಡಲು ಕಾಂಗ್ರೆಸ್ಸಿನವರಿಗೆ ಆಗಲಿಲ್ಲ ಎಂದು ಟೀಕಿಸಿದರು.
ಗಾಂಧಿ ಕುಟುಂಬಕ್ಕೆ 3 ಭಾರತರತ್ನ ಸಿಗುತ್ತದೆ. ಆದರೆ, ಸಂವಿಧಾನಶಿಲ್ಪಿ ಅಂಬೇಡ್ಕರರಿಗೆ ಭಾರತರತ್ನ ಕೊಡಬೇಕೆಂಬ ವಿಚಾರವು ಕಾಂಗ್ರೆಸ್‍ನವರ ತಲೆಯಲ್ಲಿ ಯಾವತ್ತೂ ಬರಲಿಲ್ಲ ಎಂದು ಆಕ್ಷೇಪಿಸಿದರು. ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುತ್ತಿರುವುದಾಗಿ ಮುಖ್ಯಮಂತ್ರಿಗಳು ಪತ್ರಿಕಾ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹಲವು ದಶಕಗಳ ಕಾಲ ಆಡಳಿತ ನಡೆಸಿದ್ದು ಕಾಂಗ್ರೆಸ್ಸಿನವರಿಗೆ ಸಾಕಾಗಿಲ್ಲ ಎಂದು ಟೀಕಿಸಿದರು.