ಚಿತ್ರದುರ್ಗ : ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಎಂದು ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ ಹೇಳಿದರು.
ಕರ್ನಾಟಕ ರಾಜ್ಯ ಮಾದಿಗ ಯುವಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕಣಿವೆಮಾರಮ್ಮ ಸಂಘ, ಸ್ಲಂ ಜನಾಂದೋಲನ-ಕರ್ನಾಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಚಿಕ್ಕಂದಿನಲ್ಲಿಯೇ ಸಾಕಷ್ಟು ಕಷ್ಠಗಳನ್ನು ಅನುಭವಿಸಿದ ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಂವಿಧಾನದಲ್ಲಿ ಸಮಾನತೆ ನೀಡಿದ್ದಾರೆ. ಪ್ರಜಾಪ್ರಭುತ್ವದಡಿ ಮತದಾನದ ಹಕ್ಕು ಎಲ್ಲರಿಗೂ ಸಿಕ್ಕಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಕೊಟ್ಟಿರುವ ಕೊಡುಗೆ ಎಂದರು.
ಚುನಾವಣೆಯಲ್ಲಿ ಕೇವಲ ಹಣ ಹೆಂಡಕ್ಕೆ ಅಮೂಲ್ಯವಾದ ಮತಗಳನ್ನು ಮಾರಿಕೊಳ್ಳಬೇಡಿ. ಯೋಗ್ಯರಿಗೆ ಮತ ನೀಡಿ. ಒಂದು ಕಾಲದಲ್ಲಿ ದಲಿತರಿಗೆ ಶಕ್ತಿಯಿತ್ತು. ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಈಗ ದಲಿತರಲ್ಲಿ ಒಗ್ಗಟ್ಟಿಲ್ಲದಂತಾಗಿದೆ. ಒಬ್ಬರು ಬೆಳೆದರೆ ಮತ್ತೊಬ್ಬರು ಸಹಿಸುವುದಿಲ್ಲ. ಶೈಕ್ಷಣಿಕ, ರಾಜಕೀಯವಾಗಿ ದಲಿತರು ಬಲಗೊಳ್ಳಬೇಕು ಎಂದು ಕರೆ ನೀಡಿದರು.
ದಲಿತರ ಮೇಲೆ ಎಲ್ಲಿಯಾದರೂ ದೌರ್ಜನ್ಯ, ದಬ್ಬಾಳಿಕೆಯಾದರೆ ದಲಿತರು ಹೋರಾಟಕ್ಕೆ ಇಳಿಯಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಬಹುಸಂಖ್ಯಾತರಿದ್ದರು. ಕಡಿಮೆ ಸಂಖ್ಯೆಯಲ್ಲಿರುವವರಿಗೆ ಅಧಿಕಾರ ಕೊಟ್ಟು ಕೈಕಟ್ಟಿಕೊಂಡು ನಿಲ್ಲುವಂತಾಗಿದೆ. ಮಲಗಿರುವ ದಲಿತರನ್ನು ಎಚ್ಚರಿಸಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ರವರ ಆಚಾರ-ವಿಚಾರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳುವಂತೆ ದಲಿತರಲ್ಲಿ ಡಾ.ಬಿ.ತಿಪ್ಪೇಸ್ವಾಮಿ ಮನವಿ ಮಾಡಿದರು.
ಧಮನಿತರ ಪರವಾಗಿ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ರವರ ಆಶಯಗಳು ಈಡೇರಬೇಕಾದರೆ ಮೊದಲು ದಲಿತರ ಕೈಗೆ ಅಧಿಕಾರ ಸಿಗಬೇಕು. ದಲಿತರಲ್ಲಿ ಒಗ್ಗಟ್ಟಿನ ಕೊರತೆಯಿರುವುದರಿಂದ ಪ್ರತಿ ಚುನಾವಣೆಯಲ್ಲಿಯೂ ಚಿತ್ರದುರ್ಗ ಕ್ಷೇತ್ರದಲ್ಲಿ ಹೊರಗಿನವರು ಬಂದು ಗೆಲ್ಲುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ, ಚಳ್ಳಕೆರೆ ನಗರಸಭೆ ಮಾಜಿ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಚಿಕ್ಕಂದಿನಲ್ಲಿಯೇ ಸಾಕಷ್ಟು ಕಷ್ಟ-ನೋವು, ಹಿಂಸೆ, ಅವಮಾನ ಅನುಭವಿಸಿ ದೇಶಕ್ಕೆ ಬಲಿಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಅವರ ಆದರ್ಶ, ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಪಾಲಿಸಿ ಅವರ ನೆರಳಿನಲ್ಲಿ ಬದುಕಬೇಕು. 36 ಪದವಿಗಳನ್ನು ಪಡೆದಿರುವ ಅಂಬೇಡ್ಕರ್ರವರ ಸಂವಿಧಾನವನ್ನು ಎಲ್ಲರೂ ಓದಬೇಕು. ಎಲ್ಲಾ ಜಾತಿ ವರ್ಗದವರು ಇಂದು ಸಮಾನವಾಗಿ ಬದುಕುತ್ತಿದ್ದಾರೆಂದು ಅಂಬೇಡ್ಕರ್ ಕಾರಣ ಎಂದು ಸ್ಮರಿಸಿದರು.
ದಲಿತ ಮುಖಂಡ ಬಿ.ರಾಜಣ್ಣ ಮಾತನಾಡುತ್ತ ಅಂಬೇಡ್ಕರ್ರವರು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿರುವ ಸಂವಿಧಾನದಿಂದ ದಲಿತರು ತಲೆ ಎತ್ತಿಕೊಂಡು ಓಡಾಡುವಂತಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಸಂವಿಧಾನ ನೀಡಿಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನಿಯಾಗಿ ಬದುಕುವ ಶಕ್ತಿ ಕೊಟ್ಟಿದೆ ಎಂದು ನುಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಾಂತೇಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರೂ ಅಸ್ಪøಶ್ಯತೆ ಇನ್ನು ನಿಂತಿಲ್ಲ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ಬಹಿಷ್ಕಾರಗಳು ನಡೆಯುತ್ತಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ವಿಚಾರಗಳನ್ನು ತಿಳಿದುಕೊಂಡು ಶಿಕ್ಷಣವಂತರಾದಾಗ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬಹುದು. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ಕುಮಾರ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಲ್ಲಣ್ಣ,
ಸ್ಲಂ ಜನಾಂದೋಲನದ ಮಂಜಣ್ಣ, ಕೆ.ರಾಜಣ್ಣ ವೇದಿಕೆಯಲ್ಲಿದ್ದರು. ಕನ್ನಡ ವಿಕಾಸ ರತ್ನ ಪ್ರಶಸ್ತಿ ಪುರಸ್ಕøತ ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್ಗೆ ಅಂಬೇಡ್ಕರ್ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.