ಉಜಿರೆ: ಸತ್ಯದ ಸತ್ವ ಪರೀಕ್ಷೆಯ ಕಾಲ ಇದಾಗಿದ್ದು, ಹಲವಾರು ನ್ಯಾಯಯುತವಾದ ಸಂಗತಿಗಳು SIT ತನಿಖೆಯಿಂದ ಹೊರ ಬರುತ್ತಿವೆ. ಸತ್ಯದ ಸಾಕ್ಷಾತ್ಕಾರ ಆಗುತ್ತಿರುವುದು ಸಂತಸದ ವಿಷಯ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯದವರು ಬೆಳ್ತಂಗಡಿ ತಾಲ್ಲೂಕು ಜೈನಸಮಾಜದ ಆಶ್ರಯದಲ್ಲಿ ಧರ್ಮಸ್ಥಳಕ್ಕೆ ನಡೆದ ವಾಹನ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಧರ್ಮಸ್ಥಳದಲ್ಲಿ ಹುಟ್ಟಿದ ನಮ್ಮ ಕುಟುಂಬಸ್ಥರು ಭಾಗ್ಯವಂತರು. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ, ಚಂದ್ರ ನಾಥ ಸ್ವಾಮಿ, ಧರ್ಮದೇವತೆಗಳ ಸೇವೆಗೆ ಅವಕಾಶ ದೊರೆತಿರುವುದು ಬದುಕಿನ ಸೌಭಾಗ್ಯ ಎಂದು ತಿಳಿಸಿದ್ದಾರೆ.
ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದ ಮೂರು ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ಪ್ರಸಾದವನ್ನು ಹೆಗ್ಗಡೆ ಮತ್ತು ಕುಟುಂಬಸ್ಥರಿಗೆ ಬಸದಿಯ ಪ್ರಧಾನ ಅರ್ಚಕರು ನೀಡಿದರು. ವಿಶ್ವಶಾಂತಿಗಾಗಿ 9ಬಾರಿ ಪಂಚನಮಸ್ಕಾರ ಮಂತ್ರದ ಸಾಮೂಹಿಕ ಪಠಣ ಮಾಡಲಾಯಿತು. ನಂತರ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಗೆ ತೆರಳಿ ಪಂಚನಮಸ್ಕಾರ ಮಂತ್ರವನ್ನು ಪಠಿಸಲಾಯಿತು.