ಚಿತ್ರದುರ್ಗ : ಶೋಷಣೆಗಳ ವಿರುದ್ದ ತಲೆ ಎತ್ತುವ ಜವಾಬ್ದಾರಿ ಬರಹಗಾರರ ಮೇಲಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಬಂಡಾಯ ಸಾಹಿತಿ ಡಾ.ಎಲ್.ಹನುಮಂತಯ್ಯ ಹೇಳಿದರು.
ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಚಿತ್ರದುರ್ಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಿ.ವಿ.ಜಿ.ಪಬ್ಲಿಕೇಷನ್ಸ್ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಸರ್ಕಾರಿ ಕಲಾ ಕಾಲೇಜು ಸಭಾ ಭವನದಲ್ಲಿ ಶನಿವಾರ ಪ್ರೊ. ಎಚ್.ಲಿಂಗಪ್ಪನವರ ಬೆಳಕಿನ ತೋರಣ ಆತ್ಮಕಥೆ ಬಿಡುಗಡೆಗೊಳಿಸಿ ಮಾತನಾಡಿದರು.
ಗೌತಮ ಬುದ್ದ ಮಾಂಸಹಾರಿಯಾಗಿದ್ದರು ಅಹಿಂಸೆಯ ಸಂದೇಶ ಸಾರಿದರು. ಆಹಾರ ರಾಜಕೀಯ ಮನುಷ್ಯನ ದೈನಂದಿನ ಜೀವನದಲ್ಲಿ ಸೇರಬಾರದೆಂಬುದು ಬುದ್ದನ ಆಶಯವಾಗಿತ್ತು. ಮಹಾರಾಷ್ಟ್ರದ ದಲಿತರು ಭಾರತದ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಹನ್ನೆರಡನೆ ಶತಮಾನದಲ್ಲಿ ಮೊದಲು ಧ್ವನಿ ಎತ್ತಿದವರು ದಲಿತ ಲೇಖಕರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ವಾತಾವರಣ ದಲಿತ ಕೇಂದ್ರತವಾಗಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ಶರಣಸಾಹಿತ್ಯ ಬಸವಪ್ರಭೆಯಲ್ಲಿ ಪ್ರಕಾಶಮಾನವಾಗಿತ್ತು ಎಂದರು.
ವಚನ ಸಾಹಿತ್ಯ ದಲಿತ ವಚನ ಸಾಹಿತ್ಯಕ್ಕೆ ಮಾರ್ಪಾಟಾಗಿರುವುದನ್ನು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ ಮಹತ್ವದ್ದು, ಆಧುನಿಕತೆಯ ಚರ್ಚೆ ಹಿಮ್ಮುಖ ಚಲನೆಯಲ್ಲಿ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಪಾರಂಪರಿಕ ಕನ್ನಡ ಸಾಹಿತ್ಯಕ್ಕಿಂತ ದಲಿತ ಸಾಹಿತ್ಯ ಭಿನ್ನವಾದುದು. ದಲಿತ ಸಾಹಿತ್ಯ ಕನ್ನಡದಲ್ಲಿ ಮೀಸಲು ಸಾಹಿತ್ಯವಾಗಬಾರದು ಎಂದರು.
ಕನ್ನಡ ಸಾಹಿತ್ಯಕ ವಾತಾವರಣ ಆರೋಗ್ಯ ಪೂರ್ಣವಾದುದು. ಬಿಕ್ಕಟ್ಟುಗಳಿಂದ ದಲಿತ ಸಾಹಿತ್ಯದ ವಿಮರ್ಶೆ ನಿಲ್ಲಲು ಕಾರಣ. ಕುವೆಂಪು ಆತ್ಮಕಥನ ಬಿಟ್ಟರೆ ದಲಿತ ಆತ್ಮಕಥೆಗಳು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿವೆ. ವಿಶ್ವವಿದ್ಯಾನಿಲಯಗಳು ಜಾಸ್ತಿಯಾಗಿದ್ದರೂ ಸಂಶೋಧನೆಗಳ ಗುಣಮಟ್ಟ ಕಡಿಮೆಯಾಗಿದೆ. ಚಿಂತನೆಯ ಕ್ರಮ. ಹೊಸ ತಲೆಮಾರಿನಲ್ಲಿ ಭರವಸೆಗಳನ್ನು ಮೂಡಿಸುವ ಲೇಖಕರು ಬರುತ್ತಿದ್ದಾರೆ. ಬರವಣಿಗೆ ಶಕ್ತಿ ಪ್ರೊ.ಎಚ್.ಲಿಂಗಪ್ಪನವರಲ್ಲಿದೆ. ಅಸಮಾನ್ಯ ಶಕ್ತಿ ಅವರದು. ಚಿತ್ರದುರ್ಗ ಜಿಲ್ಲೆಯಲ್ಲಿ ಬಂಡಾಯ ಚಳುವಳಿ ಕಟ್ಟಿದವರು ಅನೇಕರಿದ್ದಾರೆ. ಬರಡು ಭೂಮಿ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಹಿಂದುಳಿದ ಜಿಲ್ಲೆಗಳಲ್ಲಿ ಜ್ಞಾನಕ್ಕೆ ದಾಹವಿರುತ್ತದೆ ಎಂದು ನುಡಿದರು.
ಬಂಡಾಯ ಸಾಹಿತಿ ಚಳ್ಳಕೆರೆಯ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಗ್ರಂಥ ಕುರಿತು ಮಾತನಾಡುತ್ತ ಬರಹಗಾರರಿಗೆ ವಿಮರ್ಶೆ ಮಾಡುವವರ ಕೊರತೆಯಿದೆ. ಜಾಗತಿಕ ಮಟ್ಟದಲ್ಲಿ ಧರ್ಮಾಂದತೆಯ ಪರಾಕಷ್ಟೆ ನೈತಿಕತೆ ಅಧಃಪತನಕ್ಕೆ ಬೀಳುತ್ತಿದ್ದೇವೆ. ಆತ್ಮಕಥನ ಅವಲೋಕನಗಳ ಸುತ್ತ ಪ್ರಾಮಾಣಿಕತೆ ಸತ್ಯವಿರಬೇಕು. ಬರಹಗಾರರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಮುಖ್ಯ. ಪ್ರೊ.ಎಚ್.ಲಿಂಗಪ್ಪನವರ ನಾಲ್ಕು ಅಧ್ಯಾಯಗಳಿರುವ ಆತ್ಮಕಥನ ಪದ್ಯ, ಗದ್ಯ ಮಿಶ್ರಣದಲ್ಲಿದೆ ಎಂದು ತಿಳಿಸಿದರು.
ಅಸ್ಪøಶ್ಯತೆ ಎನ್ನುವುದು ಎಲ್ಲರ ಮನೆಯ ಹಿತ್ತಲಿನಲ್ಲಿದೆ. ಹಸಿವು, ಸಂಕಟ, ಅವಮಾನಗಳ ನಡುವೆ ಪ್ರೊ.ಎಚ್.ಲಿಂಗಪ್ಪನವರಲ್ಲಿ ಅಕ್ಷರದ ದಾಹವಿದ್ದ ಕಾರಣ ಇಂತಹ ಗ್ರಂಥಗಳನ್ನು ಹೊರತಲು ಸಾಧ್ಯವಾಗಿದೆ. ಪ್ರೊ.ಬಿ.ಕೃಷ್ಣಪ್ಪನವರ ಒಡನಾಡಿಯಾಗಿದ್ದುಕೊಂಡು ಅನೇಕ ಚಳುವಳಿಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಚಾರ ಸಾಹಿತ್ಯದ ಬಗಗೆ ಅವರಲ್ಲಿ ಒಲವಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಚಳುವಳಿಗೆ ಬರಹಗಳು ಮುಖಾಮುಖಿಯಾಗಬೇಕು. ಇದು ತಳ ಸಮುದಾಯದ ಆತ್ಮಕಥನವೂ ಹೌದು ಸ್ಪೂರ್ತಿದಾಯಕ ಅನುಕರಣೀಯ ಆತ್ಮಕಥನವೂ ಹೌದು ಎಂದು ಅಭಿಪ್ರಾಯಪಟ್ಟರು.
ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಗ್ರಂಥ ಬಿಡುಗಡೆಗೊಳಿಸಿ ಮಾತನಾಡುತ್ತ ಹೊಸ ಕೃತಿಗಳು ಬಂದಾಗ ಗಂಭೀರವಾಗಿ ಚರ್ಚಿಸಬೇಕಾದ ವಾತಾವರಣವಿಲ್ಲದಂತಾಗಿರುವುದು ನೋವಿನ ಸಂಗತಿ. ಪ್ರೊ.ಎಚ್.ಲಿಂಗಪ್ಪನವರು ಬುದ್ದ, ಬಸವ, ಅಂಬೇಡ್ಕರ್ ಪ್ರಜ್ಞೆಯಿಟ್ಟುಕೊಂಡು ಬರವಣಿಗೆ ಆರಂಭಿಸಿದ್ದಾರೆ. ಪ್ರತಿಯೊಬ್ಬರಿಗೂ ಚರಿತ್ರೆಯಿದೆ. ಆದುದರಿಂದ ಆತ್ಮಕತೆಯನ್ನು ಓದಬೇಕು. ಆತ್ಮಕಥನವನ್ನು ಬರೆದರೆ ಅದ್ಬುತವಾದ ಸಂಪತ್ತು ಸಿಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಕರಿಯಪ್ಪ ಮಾಳಿಗೆ ಮಾತನಾಡಿ ಸಾಹಿತ್ಯ ಸಾಂಸ್ಕøತಿಕ ವಾತಾವರಣ ಸೃಷ್ಟಿಯಾಗಬೇಕಿದೆ. ಬಾಲ್ಯಕ್ಕೆ ಹೋಗದಿದ್ದರೆ ಆತ್ಮಕಥನ ಬರೆಯಲು ಸಾಧ್ಯವಿಲ್ಲ. ಹಾಗಾಗಿ ಯಾರು ಬಾಲ್ಯವನ್ನು ಮರೆಯಬಾರದು. ಆತ್ಮಕಥನ ಎನ್ನುವುದು ಜೀವಂತಿಕೆಯ ಸಂಕೇತ. ಅರಿವು ಜಾಗೃತಿ ಮೂಡಿಸುವ ಆತ್ಮಕಥನಗಳು ಹೊರಬರುತ್ತಿರುವುದು ಸಮಾಧಾನವೆನಿಸುತ್ತದೆ ಎಂದು ಪ್ರೊ.ಎಚ್.ಲಿಂಗಪ್ಪನವರ ಆತ್ಮಕಥನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆತ್ಮಕಥನ ಕುರಿತು ಪ್ರೊ.ಎಚ್.ಲಿಂಗಪ್ಪ ಮಾತನಾಡುತ್ತ ಕೊನೆಯುಸಿರಿರುವತನಕ ಬರೆಯುವುದನ್ನು ಬಿಡಲ್ಲ. ಸೃಜನಶೀಲ ಸಾಹಿತ್ಯವಲ್ಲದಿದ್ದರೂ ನನ್ನ ಬರವಣಿಗೆ ವಿಚಾರ ಸಾಹಿತ್ಯವಾಗಿರಬೇಕೆಂಬುದು ನನ್ನ ಆಸೆ. ವಿಶ್ರಾಂತ ಜೀವನದಲ್ಲಿ ಯಾರಿಗೂ ಹೊರೆಯಾಗದಂತೆ ಬರವಣಿಗೆಯಲ್ಲಿ ತೊಡಗಿದ್ದೇನೆ. ಇದಕ್ಕೆ ನನ್ನ ಕುಟುಂಬ ಹಾಗೂ ಆತ್ಮೀಯರ ಸಹಕಾರವಿದೆ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಆಕಾಶವಾಣಿಯ ಶಿವಪ್ರಸಾದ್ ಇವರುಗಳು ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ರಾಂತ ಪ್ರಾಚಾರ್ಯರಾದ ಶಿವಮೊಗ್ಗದ ಪ್ರೊ.ಟಿ.ಎಸ್.ಹೂವಯ್ಯಗೌಡ, ಸಿವಿಜಿ ಪಬ್ಲಿಕೇಷನ್ಸ್‍ನ ಡಾ.ಚನ್ನವೀರಗೌಡ, ಕವಿ ತೇಕಲವಟ್ಟಿಯ ಡಾ.ಟಿ.ಎಸ್.ರಾಜೇಂದ್ರಪ್ರಸಾದ್
ಡಾ.ಮೀರಾಸಾಬಿಹಳ್ಳಿ ಶಿವಣ್ಣ ಇವರುಗಳನ್ನು ಜೀವಮಾನ ಸಾಧನೆಗಾಗಿ ಸನ್ಮಾನಿಸಲಾಯಿತು.
ಡಾ.ಲೋಕೇಶ್‍ಅಗಸನಕಟ್ಟೆ, ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ, ಯಶೋಧ ರಾಜಶೇಖರಪ್ಪ, ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ, ರಂಗಸ್ವಾಮಿ ಸಕ್ಕರ, ಪರಮೇಶ್ವರಪ್ಪ, ಪ್ರೊ.ಎಚ್.ಲಿಂಗಪ್ಪನವರ ಕುಟುಂಬದವರು ಹಾಗೂ ಅಪಾರ ಅಭಿಮಾನಿಗಳು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.