ಹೊಳಲ್ಕೆರೆ : ರೈತರಿಗೆ ನೀರು, ವಿದ್ಯುತ್ ಕೊಟ್ಟರೆ ಸಾಕು ನೆಮ್ಮದಿಯಾಗಿ ಬದುಕುತ್ತಾರೆಂಬ ಬದ್ದತೆಯಿಟ್ಟುಕೊಂಡು ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಉಡೋಗೆರೆ ಗ್ರಾಮದಲ್ಲಿ ಐದು ಕೋಟಿ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ರೈತರ ತೋಟಗಳು ಒಣಗಬಾರದೆಂದು ಚಿಕ್ಕಜಾಜೂರು ಕೋಟೆಹಾಳ್ ಸಮೀಪ ಐದು ನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ ಮಾಡಲು ರೇಷ್ಮೆ ಇಲಾಖೆಗೆ ಸೇರಿದ ಹದಿಮೂರುವರೆ ಎಕರೆ ಜಮೀನನ್ನು ವಿದ್ಯುತ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇನ್ನು ಒಂದು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಹೇಳಿದರು.
ಎಲ್ಲೆಲ್ಲಿ ಗೋಮಾಳ, ಸರ್ಕಾರಿ ಜಮೀನುಗಳಿದೆಯೋ ಅಲ್ಲಿ ನಿವೇಶನಗಳನ್ನಾಗಿ ಮಾಡಿ ಬಡವರು ಮನೆಗಳನ್ನು ನಿರ್ಮಿಸಿಕೊಳ್ಳಲು ಏಳು ಲಕ್ಷ ರೂ.ಗಳನ್ನು ನೀಡಲಾಗುವುದು. ಕಳೆದ ಮೂವತ್ತು ವರ್ಷಗಳಿಂದಲೂ ಶಾಸಕನಾಗಿದ್ದೇನೆ. ತಾಲ್ಲೂಕಿನಾದ್ಯಂತ ಎಲ್ಲಿಯೂ ಅಟ್ರಾಸಿಟಿ ಕೇಸು ದಾಖಲಾಗಲು ಅವಕಾಶ ಕೊಟ್ಟಿಲ್ಲ. ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಕ್ಷೇತ್ರಾದ್ಯಂತ ನನ್ನ ಅಭಿವೃದ್ದಿ ಕೆಲಸಗಳನ್ನು ನೋಡಿ ವಿರೋಧ ಪಕ್ಷದವರು ಹೊಟ್ಟೆ ಕಿಚ್ಚು ಪಟ್ಟುಕೊಳ್ಳುತ್ತಿದ್ದಾರೆಂದು ಶಾಸಕ ಡಾ.ಎಂ.ಚಂದ್ರಪ್ಪ ವಿರೋಧಿಗಳ ಟೀಕೆಗಳಿಗೆ ತಿರುಗೇಟು ನೀಡಿದರು.
ಕಳೆದ ಮೂವತ್ತು ವರ್ಷಗಳ ಹಿಂದೆ ಪ್ರಥಮ ಬಾರಿಗೆ ಭರಮಸಾಗರದಿಂದ ಸ್ಪರ್ಧಿಸಿದಾಗ ರಸ್ತೆಗಳಿರಲಿಲ್ಲ. ಐದಾರು ಕಿ.ಮೀ.ನಡೆದುಕೊಂಡು ಹೋಗಿ ಮತ ಕೇಳಿದ್ದೆ. ಗೆದ್ದ ಮೇಲೆ ಐದು ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಲ್ಲಿಯೂ ಗುಣ ಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದರಿಂದ ಜನ ರಸ್ತೆ ರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೆ ಚುನಾವಣೆಗೆ ನಿಂತಾಗ ಹೆಗಲ ಮೇಲೆ ಎತ್ತುಕೊಂಡು ಕುಣಿಸಿ ಗೆಲ್ಲಿಸಿದರು. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕೆಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಸದಸ್ಯರಾದ ಓಂಕಾರಪ್ಪ, ಬಿಜೆಪಿ.ಮಂಡಲ ಮಾಜಿ ಅಧ್ಯಕ್ಷ ಎಂ.ಬಿ.ಸಿದ್ದೇಶ್, ಬಿಸಲಪ್ಪ, ಸಿದ್ದೇಶ್, ಚಂದ್ರು ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.