ಹೊಳಲ್ಕೆರೆ : ವೈದ್ಯಕೀಯ ವೃತ್ತಿ ಅಮೂಲ್ಯವಾದದು. ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಬರುವವರಿಗೆ ವೈದ್ಯರುಗಳು ಸಿಗಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಸೂಚಿಸಿದರು.
ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಡುಗೆ ಮನೆ ಕಟ್ಟಡ ನಿರ್ಮಾಣ ಕಾಮಗಾರಿ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಯೋಗಾಲಯ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಾರ್ವಜನಿಕರ ಬದುಕನ್ನು ಮನೆತನದ ಬದುಕೆಂದು ತಿಳಿದುಕೊಂಡು ಕೆಲಸ ಮಾಡುತ್ತಿದ್ದೇನೆ. ಪುರಸಭೆ ಕಟ್ಟಡ ಅತ್ಯಂತ ಚಿಕ್ಕದಾಗಿತ್ತು. ಈಗ ಸುಂದರವಾಗಿ ಕಾಣುವ ರೀತಿಯಲ್ಲಿ ಬದಲಿಸಲಾಗಿದೆ. ಇಪ್ಪತ್ತು ಕೋಟಿ ರೂ.ಗಳ ವೆಚ್ಚದಲ್ಲಿ ಸಂವಿಧಾನ ಸೌದ, ಕೆ.ಎಸ್.ಆರ್.ಟಿ.ಸಿ. ಬಸ್ನಿಲ್ದಾಣಕ್ಕೆ ಎಂಟು ಕೋಟಿ ರೂ. ಆಸ್ಪತ್ರೆಗೆ 25 ಕೋಟಿ ರೂ. ಪದವಿ ಕಾಲೇಜಿಗೆ ಏಳು ಕೋಟಿ ರೂ. ಎಂ.ಎಂ.ಕಾಲೇಜಿಗೆ ಹತ್ತು ಕೋಟಿ ರೂ. ಸ್ಟೇಡಿಯಂಗೆ ಹತ್ತು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಅನುದಾನ ತರುವ ಯೋಗ್ಯತೆಯಿಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಇಲ್ಲದಂತ ಸೌಲಭ್ಯಗಳು ಇಲ್ಲಿ ರೋಗಿಗಳಿಗೆ ಸಿಗುವಂತ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ಸಿಕ್ಕಿರುವ ಅಧಿಕಾರವನ್ನು ದುರಪಯೋಗ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ. ಪಾಲಿಗೆ ಬಂದಿರುವ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ಯಾರನ್ನೋ ಟೀಕೆ ಮಾಡಿಕೊಂಡು ಕಾಲಹರಣ ಮಾಡಲ್ಲ. ಕ್ಷೇತ್ರದ ಅಭಿವೃದ್ದಿ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೇನೆ. ತಾಳಿಕಟ್ಟೆಯಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ರಾಮಗಿರಿಯಲ್ಲಿ ವೈದ್ಯರ ವಸತಿ ಗೃಹಗಳಿಗೆ ಎರಡು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಲ್ಯಾಬ್ ಮತ್ತು ಆಹಾರ ತಯಾರಿಸುವ ಕೊಠಡಿಯನ್ನು ಇನ್ನು ಆರು ತಿಂಗಳೊಳಗೆ ನಿರ್ಮಾಣ ಮಾಡಲಾಗುವುದು. ಕೊರೋನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರು ಜೀವದ ಭಯವಿಲ್ಲದೆ ಕೆಲಸ ಮಾಡಿದ್ದಾರೆ. ಅವರುಗಳು ಸೇವೆ ಅನನ್ಯ. ಗೌರವಧನವನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರೇಖಾ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಮುಖ್ಯಾಧಿಕಾರಿ ರೇಣುಕ ದೇಸಾಯಿ, ಡಾ.ವಿನಯ್, ಪುರುಸಭೆ ಸದಸ್ಯರುಗಳಾದ ಆರ್.ಎ.ಅಶೋಕ್, ಕೆ.ಸಿ.ರಮೇಶ್, ಮಲ್ಲಿಕಾರ್ಜುನಸ್ವಾಮಿ, ಮುರುಗೇಶ್, ಸುಧಾ ಬಸವರಾಜ್, ರುದ್ರಪ್ಪ, ಸೈಯದ್ಸಚಿಲ್, ಸೈಯದ್ ಮನ್ಸೂರ್, ಪೂರ್ಣಿಮ ಬಸವರಾಜ್, ಮಮತಾ ಜಯಸಿಂಹ ಖಾಟ್ರೋತ್, ಆಸ್ಪತ್ರೆ ಎ.ಆರ್.ಎಸ್.ಸಮಿತಿಯ ಅಧ್ಯಕ್ಷ ಜಗದೀಶ್ ನಡಿಗರ್
ಸದಸ್ಯರುಗಳಾದ ನಟರಾಜ್, ರಮೇಶ್, ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.