ಬೆಂಗಳೂರು : ಕರ್ನಾಟಕ ವಿಧಾನಸಭೆ ಮಂಗಳವಾರ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ 2025’ಕ್ಕೆ ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಇನ್ನು ಮುಂದೆ ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯವೆಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಹಸಿರು ನಿಶಾನೆ ದೊರೆತಿದೆ. ಇದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದ್ದ ಹೆಜ್ಜೆಗಳಿಗೆ ಅನುಗುಣವಾಗಿದೆ.
ಭಾರತದ ಆಧುನಿಕ ಆರ್ಥಿಕ ನೀತಿಯ ಹರಿಕಾರ, ಮಾಜಿ ಪ್ರಧಾನಿ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರು 2024ರ ಡಿಸೆಂಬರ್‌ನಲ್ಲಿ ನಿಧನರಾದರು. ಅವರು 1991ರಲ್ಲಿ ಕೇಂದ್ರದ ಹಣಕಾಸು ಸಚಿವರಾಗಿದ್ದಾಗ ಜಾರಿಗೆ ತಂದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳನ್ನು ದೇಶದ ಆರ್ಥಿಕತೆಯ ಉನ್ನತಿಗೆ ದಿಕ್ಕು ನೀಡಿದ ಮಹತ್ವದ ಹೆಜ್ಜೆ ಎಂದು ಇತಿಹಾಸ ಗುರುತಿಸಿದೆ.
ಹಾಗಾದರೂ, ಈ ಮರುನಾಮಕರಣಕ್ಕೆ ವಿರೋಧ ಪಕ್ಷ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹೊಸ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅದಕ್ಕೆ ಡಾ. ಮನಮೋಹನ್ ಸಿಂಗ್ ಅವರ ಹೆಸರಿಡಬೇಕೆಂದು ಸಲಹೆ ನೀಡಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡುತ್ತಾ, “ಇತ್ತಿಚೆಗೆ ನಿಧನರಾದ ಒಂದು ಪ್ರತಿಷ್ಠಿತ ನಾಯಕನಿಗೆ ಇದು ಸೂಕ್ತ ಗೌರವವಲ್ಲ. ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಹೆಸರು ಬದಲಾಯಿಸುವ ಬದಲು ಹೊಸ ಸಂಸ್ಥೆ ಆರಂಭಿಸಬೇಕು,” ಎಂದು ಹೇಳಿದ್ದಾರೆ.