ಚಿತ್ರದುರ್ಗ : ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞರಾಗಿದ್ದರು ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಡಾ.ಮನಮೋಹನ್ಸಿಂಗ್ ಶ್ರದ್ದಾಂಜಲಿ ಹಾಗೂ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಲ್ರ್ಡ್ ಬ್ಯಾಂಕ್ ಸಂಪರ್ಕವಿಟ್ಟುಕೊಂಡಿದ್ದ ಡಾ.ಮನಮೋಹನ್ಸಿಂಗ್ಗೆ ಯಾರ ಮೇಲೂ ಸಿಟ್ಟು, ದ್ವೇಷವಿರಲಿಲ್ಲ. ಒಮ್ಮೆ ಅವರನ್ನು ಚಿತ್ರದುರ್ಗಕ್ಕೂ ಕರೆಸಿದ್ದೆ. ಭಾರತದ ಹಣಕಾಸು ಪರಿಸ್ಥಿತಿ ಸುಧಾರಿಸಿ ಅನೇಕ ಯೋಜನೆಗಳನ್ನು ನೀಡಿದ ಸಿಂಗ್ ರಾಜಕಾರಣಿ ಎನ್ನುವುದಕ್ಕಿಂತ ಒಳ್ಳೆ ಆರ್ಥಿಕ ಚಿಂತಕ. ಸಜ್ಜನ ದೇಶದ ಅಭಿವೃದ್ದಿ ಬಗ್ಗೆ ದೂರದೃಷ್ಟಿಯಿಟ್ಟುಕೊಂಡಿದ್ದರು ಎಂದು ಗುಣಗಾನ ಮಾಡಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಬಲಿಷ್ಠ ರಾಷ್ಟ್ರ ಅಮೇರಿಕಾ ಆರ್ಥಿಕವಾಗಿ ದಿವಾಳಿಯಾಗಿದ್ದಾಗ ಡಾ.ಮನಮೋಹನ್ಸಿಂಗ್ರವರ ಸಲಹೆ ಪಡೆದು ಚೇತರಿಸಿಕೊಂಡಿತ್ತು. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಭಾರತ ದೇಶವನ್ನು ಆಳಿದ ಸಿಂಗ್ರನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದಾಗಿನಿಂದಲೂ ನೋಡಿದ್ದೇನೆ. ಸರಳ ಸಂಪನ್ನ ರಾಜಕಾರಣಿಯಾಗಿದ್ದ ಅವರನ್ನು ಬಹಳ ಜನ ಮೌನಿ ಎಂದು ಕರೆಯುತ್ತಿದ್ದರು. ಅವರೊಬ್ಬ ಜ್ಞಾನಿ ಎಂದು ಹೇಳಿದರು.
ಡಾ.ಮನಮೋಹನ್ಸಿಂಗ್ರವರ ಆರ್ಥಿಕತೆಯನ್ನು ವಿಶ್ವವೇ ಒಪ್ಪಿಕೊಂಡಿತ್ತು. ಸೋನಿಯಾಗಾಂಧಿಗೆ ಪ್ರಧಾನಿಯಾಗುವ ಅವಕಾಶ ಸಿಕ್ಕಿದ್ದನ್ನು ತ್ಯಜಿಸಿ ಮನಮೋಹನ್ಸಿಂಗ್ರನ್ನು ಪ್ರಧಾನಿಯನ್ನಾಗಿ ಮಾಡಿದರು. ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರಿಂದ ಬಡವರು ಕೆಲಸ ಹುಡುಕಿಕೊಂಡು ಗುಳೆ ಹೋಗುವುದು ತಪ್ಪಿದಂತಾಯಿತು ಎಂದರು.
ಬಡ ಮಕ್ಕಳಿಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಅವಕಾಶ ಸಿಗಬೇಕೆನ್ನುವ ಆಸೆಯಿಂದ ಮಾಹಿತಿ ಹಕ್ಕು ಶಿಕ್ಷಣ ಜಾರಿಗೆ ತಂದ ಡಾ.ಮನಮೋಹನ್ಸಿಂಗ್ ಜಾತ್ಯಾತೀತ, ಧರ್ಮಾತೀತ
ಅಪ್ರತಿಮೆ ರಾಜಕಾರಣಿಯಾಗಿದ್ದರು. ಪ್ರಧಾನಿಯಾಗಿದ್ದಾಗ ಪಕ್ಷಾತೀತವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವಂತ ದೊಡ್ಡ ಗುಣ ಅವರದಾಗಿತ್ತು, ಆರ್ಥಿಕ ಸುಧಾರಣೆಗಾಗಿಯೇ ಬದುಕಿದ ಸಿಂಗ್ರವರ ನಿಧನದಿಂದ ವಿಶ್ವಕ್ಕೆ ನಷ್ಟವುಂಟಾಗಿದೆ ಎಂದು ಕಂಬನಿ ಮಿಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ ಮಾತನಾಡುತ್ತ ಜಾಗತೀಕರಣವಾಗಿ ದೇಶವನ್ನು ಆರ್ಥಿಕವಾಗಿ ಬಲಿಷ್ಟಗೊಳಿಸಿದ ಡಾ.ಮನಮೋಹನ್ಸಿಂಗ್ ಬಡವರಿಗಾಗಿ ಉದ್ಯೋಗಖಾತ್ರಿ ಯೋಜನೆಯನ್ನು ಕೊಟ್ಟರು. ಇದರಿಂದ ವರ್ಷಕ್ಕೆ ನೂರು ದಿನಗಳ ಕಾಲ ಕೆಲಸ ಸಿಗುವಂತಾಯಿತು.
ರಾಷ್ಟ್ರ-ರಾಷ್ಟ್ರಗಳ ನಡುವೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದ ಮೇರು ವ್ಯಕ್ತಿತ್ವದ ಸಿಂಗ್ ಅಗಲಿಕೆಯಿಂದ ದೇಶಕ್ಕೆ ಅತೀವ ನೋವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎ.ವಿ.ಉಮಾಪತಿ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷರುಗಳಾದ ನಜ್ಮತಾಜ್, ಕುಮಾರ್ಗೌಡ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಎನ್.ಶಶಾಂಕ್, ವಕೀಲರುಗಳಾದ ಜಗದೀಶ್ ಗುಂಡೇರಿ
ರವೀಂದ್ರ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಎಸ್.ಜಯಣ್ಣ, ಎ.ಸಾಧಿಕ್ವುಲ್ಲಾ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಮೊಹಿದ್ದೀನ್, ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಪ್ರಚಾರ ಸಮಿತಿ ಅಧ್ಯಕ್ಷ
ಆರ್.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಮುದಸಿರ್ನವಾಜ್. ಇಂದಿರಾ, ಬಸಮ್ಮ, ಎಸ್ಸಿ. ವಿಭಾಗದ ಉಪಾಧ್ಯಕ್ಷ ಡಿ.ಕುಮಾರ್ಪಿಳ್ಳೆಕೆರನಹಳ್ಳಿ, ಚಾಂದ್ಪೀರ್, ಅಕ್ಬರ್ ಇನ್ನು ಅನೇಕರು ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.