ಚಿತ್ರದುರ್ಗ : ಚಿತ್ರದುರ್ಗದ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇಸಮ್ಮೇಳನದ ಸರ್ವಧ್ಯಾಕ್ಷರಾಗಿ ಡಾ.ಸಿದ್ದರಾಮ ಬೆಲ್ದಾಳ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಸಿ.ಸೋಮೇಶೇಖರ್ ತಿಳಿಸಿದರು.
ಚಿತ್ರದುರ್ಗ ನಗರದ ಬೃಹನ್ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರಿನ ಡಾ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಡಾ. ಸಿದ್ದರಾಮ ಬೆಲ್ದಾಳ್ರವರ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ಇವರು ಶರಣ ಸಾಹಿತ್ಯದ ಬಗ್ಗೆ ಧರ್ಮಾಂಧತೆ, ಕೋಮು ಗಲಭೆ, ಭಯೋತ್ತಾದನೆಗಳ ನಿರ್ಮೂಲನೆಗೆ ಆಸಕ್ತಿಯನ್ನು ವಹಿಸಿ ಮಾನವೀಯ ಏಕತೆ ಉದ್ದೇಶದಿಂದ ಏಕತಾ ಪರಿಷತ್ತನ್ನು ಸ್ಥಾಪಿಸುವುದರ ಮೂಲಕ ಶರಣರು ಪ್ರತಿಪಾದಿಸಿದ ಸಮಾನತೆಯ ಸಮಾಜದ ನಿರ್ಮಾಣದ ದಿಸೆಯಲ್ಲಿ ಪ್ರಮಾಣಿಕ ಪ್ರಯತ್ನವನ್ನು ನಿರ್ವಹಿಸುತ್ತಾ ಬಂದಿದ್ಧಾರೆ ಎಂದಿದ್ದಾರೆ.
ಪರಮಪೂಜ್ಯರು ಔಪಚಾರಿಕ ಶಿಕ್ಷಣವನ್ನು ಹೆಚ್ಚು ಪಡೆಯದೇ ಇದ್ದರೂ ಆಧ್ಯಾತ್ಮಿಕ ಶಿಕ್ಷಣದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿರುವವರು. ಅವರು ಶರಣ ಸಾಹಿತ್ಯಕ್ಕೆ ಸಂಬಂದಿಸಿದಂತೆ ಹಲವಾರು ಮೌಲಿಕ ಕೃತಿಗಳನ್ನು ರಚಿಸುವ ಮೂಲಕ ಶರಣ ಸಾಹಿತ್ಯಕ್ಕೆ ವಿಶೇಷವಾದಂತಹ ಕೊಡುಗೆಯನ್ನು ನೀಡಿರುತ್ತಾರೆ.
ವಚನ ತತ್ವಸಾರ, ಇಷ್ಟಲಿಂಗಾರ್ಚನೆ ವಿಧಾನ, ಷತ್ಸ್ಥಳ ಸಂಪತ್ತು, ವಚನ ತತ್ವಾನುಭವ, ಬಸವ ತತ್ವ ಪ್ರದೀಪಿಕೆ, ಶಿವಯೋಗ ಸುಖ, ಶರಣರ ಬೆಡಗಿನ ಬೆಳಕು, ಚನ್ನಬಸವಣ್ಣನವರ ವಚನ ವ್ಯಾಖ್ಯಾನ, ಶೂನ್ಯ ಸಂಪಾದನೆಯ ರಹಸ್ಯದ ಬಗ್ಗೆ ಬೃಹತ್ ಗ್ರಂಥ ರಚನೆ. ಅಕ್ಕಮಹಾದೇವಿ-ಯೋಗಾಂಗ ತ್ರಿವಿಧಿಯ ತವನಿಧಿ, ವಚನಗಳಲ್ಲಿ ಶಿವಯೋಗ, ಮುಂತಾದ ಅತ್ಯಂತ ಶ್ರೇಷ್ಠ ಕೃತಿಗಳನ್ನು ಶರಣ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ ಎಂದರು.
ಮೂಲತಃ ಶೋಷಿತ ಸಮುದಾಯದಲ್ಲಿ ಜನಿಸಿದ ಇವರು ಶರಣ ತತ್ವ ಪ್ರಸಾರದ ಮೂಲಕ ದಲಿತರ ಮೇಲಿನ ಶೋಷಣೆಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ದನಿ ಎತ್ತುತ್ತಲೇ ಇದ್ದಾರೆ. ಪೂಜ್ಯರ ಸಾಹಿತ್ಯ ಮತ್ತು ಸಮಾಜಸೇವೆಯನ್ನು ಗುರುತಿಸಿ ನಾಡಿನ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಸರ್ಕಾರ ಅವರಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಚಿತ್ರದುರ್ಗದ ಮಠದವರು ನೀಡುವ ಮೊದಲ ಬಸವ ಶ್ರೀ ಪ್ರಶಸ್ತಿ, ಕುಮಾರ ಕಕ್ಕಯ್ಯ ಪ್ರಶಸ್ತಿ, ಕಂಬಳೇ ಬಾಬಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೀದರ್ ಜಿಲ್ಲಾ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ, ಕಾಯಕ ಪ್ರಶಸ್ತಿ, ಸುವರ್ಣ ಸಿರಿ. ಹಳಕಟ್ಟಿ ಪ್ರಶಸ್ತಿ, ಮೃತ್ಯುಂಜಯ ಪ್ರಶಸ್ತಿ, ಮುಂತಾದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಅವರಿಗೆ ಕಲಬುರಗಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದು ಸೋಮಶೇಖರ್ ತಿಳಿಸಿದರು.
ಅವರ “ಸತ್ಯ ಶರಣರು ಸತ್ಯ ಶೋಧ.” ಸುಮಾರು 1400 ಪುಟಗಳ ಬೃಹತ್ ಗ್ರಂಥವು ಮುದ್ರಣದ ಹಂತದಲ್ಲಿದೆ. ಬೆಲ್ದಾಳ ಶರಣರನ್ನು ಕುರಿತು ಕೆಲವು ವಿದ್ಯಾರ್ಥಿಗಳು ಎಂ.ಫಿಲ್ ಮತ್ತು ಪಿಹೆಚ್.ಡಿ ಪದವಿಯನ್ನು ಸಹ ಪಡೆದುಕೊಂಡಿರುವುದು ಅವರ ವ್ಯಕ್ತಿತ್ವದ ಘನತೆಗೆ ಸಂದ ಗೌರವವಾಗಿದೆ. ಶರಣ ಸಾಹಿತ್ಯದಲ್ಲಿ ಅಪಾರವಾದ ಕೃಷಿಯನ್ನು ನಡೆಸಿ ಶರಣ ಸಾಹಿತ್ಯದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ ಶರಣ ಸಾಹಿತ್ಯದ ಬಗ್ಗೆ ಅತ್ಯಂತ ಪ್ರಬುದ್ಧವಾಗಿ ಪ್ರವಚನ ಮಾಡಬಲ್ಲ ಪೂಜ್ಯರು ಶರಣ ತತ್ವ ಪ್ರಸಾರಕ್ಕಾಗಿಯೇ ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿರುತ್ತಾರೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠದ ಸದಸ್ಯರು ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಡಾ.ಬಸವಕುಮಾರ ಶ್ರೀಗಳು, ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷರು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎಂ.ವಿರೇಶ್, ಖಂಜಾಚಿ ಎಸ್. ಷಣ್ಮುಖಪ್ಪ, ಹಂಪಯ್ಯ, ಷಡಾಕ್ಷರಯ್ಯ, ರುದ್ರಮುನಿ, ಗಣೇಶಯ್ಯ ಭಾಗವಹಿಸಿದ್ದರು.