ಚಿತ್ರದುರ್ಗ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ.ರೈತರ ಬಗ್ಗೆ ಎಳ್ಳಷ್ಟು ಸಹ ಕಾಳಜಿ ವಹಿಸುತ್ತಿಲ್ಲ, ನಮಗೆ ಅನ್ನವನ್ನು ನೀಡುವ ಅನ್ನದಾತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ, ಸಕಾಲಕ್ಕೆ ಸರಿಯಾಗಿ ಹೊಲಕ್ಕೆ ಗೊಬ್ಬರವನ್ನು ನೀಡದಿದ್ದರೆ ರೈತ ವರ್ಷದ ಅನ್ನವನ್ನು ಕಳೆದುಕೊಳ್ಳುತ್ತಾನೆ ಇದರ ಬಗ್ಗೆ ಸರ್ಕಾರಕ್ಕಾಗಲಿ, ನಮ್ಮನ್ನಾಳುವ ಚುನಾಯಿತ ಪ್ರತಿನಿಧಿಗಳಿಗೆ ಅರಿವಿಲ್ಲ ಎಂದು ರಾಜ್ಯ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿನಯ ಕುಮಾರ್ ಆರೋಪಿಸಿದರು.
ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾದವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯದಲ್ಲಿ ಯೂರಿಯ ಗೊಬ್ಬರ ಕೃತಕ ಅಭಾವವನ್ನು ಸೃಷ್ಟಿ ಮಾಡುವುದರ ಮೂಲಕ ಗೊಬ್ಬರಕ್ಕಾಗಿ ಅನ್ನದಾತರು ಅಲೆದಾಡುವಂತ ಪರಿಸ್ಥಿತಿಯನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ರೈತರ ಪರವಾಗಿ ನಿಲ್ಲುವುದರ ಮೂಲಕ ಸದನದ ಒಳಗೂ ಹೊರಗೂ ಸಹಾ ರೈತರ ಪರವಾಗಿ ಹೋರಾಟವನ್ನು ಮಾಡಲಾಗುತ್ತದೆ. ರೈತರು ಹೆದರುವ ಅಗತ್ಯ ಬೇಡ ಬಿಜೆಪಿ ನಿಮ್ಮ ಪರವಾಗಿ ಇದೆ ಎಂಬುದನ್ನು ಮರೆಯಬೇಡಿ ಎಂದರು.
ನಮ್ಮ ರಾಜ್ಯದ ಜನತೆ ನಮಗೆ ಒಳ್ಳೇಯದನ್ನು ಮಾಡಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿದರು, ಮಳೆಯನ್ನು ನಂಬಿ ತಮ್ಮ ಬದುಕನ್ನು ನಡೆಸುವ ಅನ್ನದಾತ ಮಳೆ ಬಂದಾಗ ಭೂಮಿಯನ್ನು ಬಿತ್ತನೆ ಮಾಡಿ ಬೆಳೆಯನ್ನು ಬೆಳೆದು ಹಸಿದವರಿಗೆ ಅನ್ನವನ್ನು ನೀಡುವಂತ ಕಾರ್ಯವನ್ನು ಮಾಡುತ್ತಾನೆ ಆತ ಬೆಳೆಯನ್ನು ಬೆಳೆಯಲು ಸರ್ಕಾರ ನೆರವಾಗಬೇಕಿದೆ ಆತನಿಗೆ ಅಗತ್ಯವಾಗಿ ಬೇಕಾದ ಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕಗಳನ್ನು ನೀಡಬೇಕಿದೆ, ಆದರೆ ರಾಜ್ಯ ಸರ್ಕಾರ ರೈತನಿಗೆ ಸರಿಯಾದ ರೀತಿಯಲ್ಲಿ ಗೊಬ್ಬರವನ್ನು ನೀಡದೆ ರೈತ ಶಾಪಕ್ಕೆ ಗುರಿಯಾಗಿದೆ. ಆಗಸ ಸಾಕಿದ ಕತ್ತೇನೆ ತನ್ನನ್ನು ಸಾಕಿದವನಿಗೆ ನಿಯತ್ತಾಗಿ ಕೆಲಸವನ್ನು ಮಾಡುತ್ತದೆ ಆದರೆ ತಮಗೆ ಮತವನ್ನು ನೀಡಿದ ಮತದಾರರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯವನ್ನು ನೀಡುತ್ತಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ಮಳೆಗಾಲದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸೌಲಭ್ಯವನ್ನು ನೀಡಬೇಕಿದೆ ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಹಲವಾರು ಬಾರಿ ದೆಹಲಿ ಪ್ರವಾಸ ಮಾಡಿದರೂ ಸಹಾ ಒಮ್ಮೆಯೂ ಸಹಾ ರೈತರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಸಚಿವರಾಗಲೀ, ಅಧಿಕಾರಿಗಳ ಬಳಿಯಾಗಲಿ ಮಾತನಾಡಿಲ್ಲ ಎಂದ ಅವರು, ಕೇಂದ್ರಕ್ಕೆ ಬರೀ ಪತ್ರವನ್ನು ಬರೆಯುವುದು ಮಾತ್ರ ಆಗದೆ ನಿಜವಾದ ರೀತಿಯಲ್ಲಿ ಕೆಲಸವಾಗಬೇಕಿದೆ ಸಿದ್ದರಾಮಯ್ಯ ರವರ ಸಚಿವ ಸಂಪುಟದಲ್ಲಿ ಇರುವ ಸಚಿವರಲ್ಲಿ ಒಂದೊಂದು ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಿದ್ದಾರೆ, ಮುಂಗಾರಿಗೆ ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಕೇಂದ್ರ ಸರ್ಕಾರ ನೀಡಿದೆ ಆದರೆ ರಾಜ್ಯ ಸರ್ಕಾರ ಪಡೆಯುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು. ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ್ದು, ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುವುದರ ಮೂಲಕ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿಯಾದ ಮಲ್ಲಿಕಾರ್ಜನ್, ಮಾಜಿ ಅಧ್ಯಕ್ಷರಾದ ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ ದಾಸ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್, ಮೊಳಕಾಲ್ಮೂರು ಅಧ್ಯಕ್ಷ ಶ್ರೀರಾಮರೆಡ್ಡಿ, ಚಳ್ಳಕೆರೆ ಅಧ್ಯಕ್ಷ ಸುರೇಶ್ ಮಧುರೆ, ಜಿಲ್ಲಾ ಉಪಾಧ್ಯಕ್ಷ ಕಲ ಸೀತರಾಮರೆಡ್ಡಿ, ಜಿ.ಪಂ.ಮಾಜಿ ಸದಸ್ಯ ರಮೇಶ್, ಯುವ ಮುಖಂಡ ಡಾ.ಸಿದ್ದಾರ್ಥ ಗುಡಾರ್ಪಿ, , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಮ್ಮನಹಳ್ಳಿ ನಾಗರಾಜ್, ಕವನ, ಸುಮಾ, ಕವಿತಾ, ರೇಖಾ, ರತ್ಮಮ್ಮ ಪಾಪೇಶ್ ನಾಯ್ಕ್, ನಾಗರಾಜ ಬೇದ್ರೇ, ವೆಂಕಟೇಶ್ ಶಂಭು, ಕಿರಣ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ರೈತರು ಇತರರು ಭಾಗವಹಿಸಿದ್ದರು.