ಮೈಸೂರು :ಮೈಸೂರು ನಗರದ ಇನ್ಫೋಸಿಸ್ ಆವರಣದಲ್ಲಿ ಇಂದು ಮುಂಜಾನೆ 4:30ರ ಸುಮಾರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇದರ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿರತೆ ಸೆರೆ ಹಿಡಿಯಲು ಚಿರತೆ ಕಾರ್ಯಪಡೆ ತಂಡವನ್ನು ಕಳುಹಿಸಲಾಗಿದೆ. ತಂಡದಲ್ಲಿ ಪಶುವೈದ್ಯರು, ಚಿರತೆ ಸೆರೆ ತರಬೇತಿ ಪಡೆದ 40 ಸಿಬ್ಬಂದಿ ಇದ್ದಾರೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳೂ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸಿಸಿ ಟಿವಿಯಲ್ಲಿ ಚಿರತೆ ಸಂಚಾರದ ದೃಶ್ಯಗಳು ಸೆರೆಯಾಗಿದೆ. ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿನಲ್ಲಿ ಚಿರತೆ ಇರುವಿಕೆ ಖಚಿತವಾದ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರಣೆಗೆ ಸೂಚನೆ ನೀಡಲಾಗಿದೆ.
ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬಲೆ, ಅರವಳಿಕೆ ಔಷಧದೊಂದಿಗೆ ಸಜ್ಜಾಗಿದ್ದಾರೆ. ಇನ್ಫೋಸಿಸ್ ಆವರಣ ಸುಮಾರು 350 ಎಕರೆಯಷ್ಟಿದ್ದು, ಕೆಲವು ಭಾಗ ಕಾಡಿನಂತೆಯೇ ಇದೆ. ಇಲ್ಲಿ ಕಾರ್ಯಾಚರಣೆ ಸಾಹಸವೇ ಸರಿ. ಆದರೂ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ಚಿರತೆ ಸಮೀಪದ ವಸತಿ ಪ್ರದೇಶಗಳಿಗೆ ನುಗ್ಗದಂತೆ ಸಹ ಕ್ರಮ ವಹಿಸಲಾಗಿದೆ. ಚಿರತೆ ಪತ್ತೆಗೆ ಥರ್ಮಲ್ ಕ್ಯಾಮೆರಾ ಅಳವಡಿಸಿದ ಡ್ರೋನ್ ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶೀಘ್ರವೇ ಚಿರತೆ ಸೆರೆ ಹಿಡಿದು ಜನರ ಆತಂಕ ದೂರ ಮಾಡುತ್ತಾರೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.