ಹೊಳಲ್ಕೆರೆ : ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಿಕೊಳ್ಳಲು ಗುಡ್ಡ ಕಡಿದು ಎ.ಪಿ.ಎಂ.ಸಿ. ಕಟ್ಟಲಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಖ್ಯ ಪ್ರಾಂಗಣದಲ್ಲಿ ಒಣ ಅಡಿಕೆ ಮತ್ತು ಹಸಿ ಅಡಿಕೆ ನಿಯಂತ್ರಿತ ವ್ಯಾಪಾರ ವಹಿವಾಟು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಾ ವಿಚಾರದಲ್ಲಿಯೂ ಹೊಳಲ್ಕೆರೆ ತಾಲ್ಲೂಕು ಅಭಿವೃದ್ದಿಯಾಗಬೇಕೆಂದು ಎ.ಪಿ.ಎಂ.ಸಿ. ಮಾರುಕಟ್ಟೆ ನಿರ್ಮಿಸಲಾಗಿದೆ. ಉಳಿದ ಜಾಗವನ್ನು ತುಮ್ಕೋಸ್ಗೆ ನೀಡಿದ್ದು, ಮಳಿಗೆ ಅಂಗಡಿಗಳನ್ನು ಕಟ್ಟಲಾಗುವುದು. ಮಾರ್ಕೆಟ್ನಲ್ಲಿ ವಿಶಾಲವಾದ ರಸ್ತೆ, ಗೋಡಾನ್ಗಳ ವ್ಯವಸ್ಥೆಯಾಗಿದೆ. ದೆಹಲಿಗೆ ಹೋಗಿ ಹದಿನಾರು ಕೋಟಿ ರೂ.ಗಳನ್ನು ಮಂಜೂರು ಮಾಡಿಸಿಕೊಂಡು ಬಂದು ಫೋರ್ಲೈನ್ ರಸ್ತೆ ಮಾಡಿಸಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಪ್ರಾಮಾಣಿಕತೆ ಬದ್ದತೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕುಕ್ಕುವಾಡೇಶ್ವರಿ ದೇವಸ್ಥಾನದ ಜಾಗದಲ್ಲಿ ಐದು ಕೋಟಿ ರೂ.ಗಳ ವೆಚ್ಚದಲ್ಲಿ ಮಾರ್ಕೆಟ್ ನಿರ್ಮಾಣ ಮಾಡಲಾಗುವುದು. ಇದರಿಂದ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಸಂತೆ ಹಾಗೂ ಫುಟ್ಪಾತ್ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಗುಡ್ಡದಲ್ಲಿ ನಾಲ್ಕುವರೆ ಕೋಟಿ ರೂ.ವೆಚ್ಚದಲ್ಲಿ ವಸತಿ ಗೃಹಗಳನ್ನು ಕಟ್ಟಿಸಿರುವುದರಿಂದ ಮೂವರು ನ್ಯಾಯಾಧೀಶರು ಇಲ್ಲಿ ವಾಸಿಸುತ್ತಿದ್ದಾರೆ. ಐ.ಟಿ.ಐ. ಪಾಲಿಟೆಕ್ನಿಕ್, ಕಿತ್ತೂರುರಾಣಿ ಚೆನ್ನಮ್ಮ, ಮುರಾರ್ಜಿದೇಸಾಯಿ, ಕಸ್ತೂರಬಾ ವಸತಿ ಶಾಲೆಗಳನ್ನು ಕಟ್ಟಿಸಲಾಗಿದೆ. ದುಡ್ಡು ಕೊಟ್ಟರು ಜಮೀನು ಸಿಗದಂತೆ ಕಷ್ಟದ ಪರಿಸ್ಥಿತಿಯಲ್ಲಿ ಎ.ಪಿ.ಎಂ.ಸಿ.ಯಲ್ಲಿ ಅನೇಕ ಕಟ್ಟಡಗಳಾಗಿದೆ. ಒಳ್ಳೆಯ ಗಾಳಿ, ಬೆಳಕು ಸ್ವಚ್ಚಂದವಾದ ವಾತಾವರಣವಿದೆ ಎಂದು ಹೇಳಿದರು.
ಹೊಳಲ್ಕೆರೆ ಬಿಜೆಪಿ.ಮಂಡಲ ಅಧ್ಯಕ್ಷ ಕುಮಾರಣ್ಣ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಹೇಶ್ವರಪ್ಪ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅಂಕಳಪ್ಪ, ಉಪಾಧ್ಯಕ್ಷ ದಾಸಯ್ಯನಹಟ್ಟಿ ರಮೇಶ್, ಡಿ.ಬಿ.ಕುಮಾರ್, ಗೋವಿಂದಪ್ಪ, ಬಿ.ಚಿದಾನಂದಪ್ಪ, ಮಂಜುನಾಥ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಸದಸ್ಯರುಗಳಾದ ಮರುಳಸಿದ್ದಪ್ಪ, ಸರಸ್ವತಿ
ಗಿರಿಜಮ್ಮ, ಮಹೇಶ್ವರಪ್ಪ, ಕಾರ್ಯದರ್ಶಿ ಸುರೇಶ್ ಹಾಗೂ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

































