ಉತ್ತರ ಪ್ರದೇಶ : ಬಾರಾಬಂಕಿಯಲ್ಲಿ ಬುಧವಾರ ರಾತ್ರಿ ವೇಗವಾಗಿ ಸಂಚರಿಸುತ್ತಿದ್ದ ಡಂಪರ್ ಟ್ರಕ್ ನಿಯಂತ್ರಣ ತಪ್ಪಿ ಸೇತುವೆಯ ಬೇಲಿಗೆ ಡಿಕ್ಕಿ ಹೊಡೆದು ಸುಮಾರು 25 ಅಡಿ ಎತ್ತರದ ರೈಲ್ವೆ ಹಳಿಗೆ ಉರುಳಿ ಬಿದ್ದ ಘಟನೆ ನಡೆದಿದೆ.
ಘಟನೆಯ ಕೆಲವು ಕ್ಷಣಗಳ ಮೊದಲು ಅಮೃತಸರ–ಬಿಹಾರ ಮಾರ್ಗದ ಗರೀಬ್ ರಥ ಎಕ್ಸ್‌ಪ್ರೆಸ್ ಪಕ್ಕದ ಹಳಿಯಲ್ಲಿ ಹಾದುಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಫ್ಲೈವುಡ್ ಹಾಳೆಗಳನ್ನು ಹೊತ್ತಿದ್ದ ಈ ಟ್ರಕ್ ರಾತ್ರಿ ಸುಮಾರು 9 ಗಂಟೆಗೆ ಓವರ್‌ಬ್ರಿಡ್ಜ್ ದಾಟುತ್ತಿದ್ದಾಗ ಅಪಘಾತ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾರಾಬಂಕಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯ ಅವರು ನೀಡಿದ ಮಾಹಿತಿಯ ಪ್ರಕಾರ, ಟ್ರಕ್ ರೈಲ್ವೆಯ ಓವರ್‌ಹೆಡ್ ವಿದ್ಯುತ್ ಮಾರ್ಗಗಳಿಗೆ ತೀವ್ರ ಹಾನಿ ಉಂಟುಮಾಡಿದ್ದು, ಅಧಿಕಾರಿಗಳು ತಕ್ಷಣವೇ ಆ ವಿಭಾಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಿದರು. ಘಟನೆಯ ನಂತರ ರೈಲ್ವೆ ಎಂಜಿನಿಯರ್‌ಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಹಾನಿಗೊಂಡ ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವ ಜೊತೆಗೆ ಹಳಿಗೆ ಬಿದ್ದಿದ್ದ ಟ್ರಕ್ ಮತ್ತು ಅವಶೇಷಗಳನ್ನು ತೆರವುಗೊಳಿಸಲು ಕಾರ್ಯಾರಂಭಿಸಿದರು. ವಿದ್ಯುತ್ ವ್ಯತ್ಯಯ ಮತ್ತು ಹಳಿಗೆ ಬಿದ್ದಿದ್ದ ಟ್ರಕ್ ಎರಡೂ ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿಯಾಯಿತು.
ಡಿಕ್ಕಿಯ ಹೊಡೆತದಿಂದ ಸಂಪೂರ್ಣ ನಜ್ಜುಗುಜ್ಜಾದ ಕ್ಯಾಬಿನ್ ಒಳಗೆ ಸಿಲುಕಿದ್ದ ಟ್ರಕ್ ಚಾಲಕನನ್ನು ಪೊಲೀಸರು, ರೈಲ್ವೆ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ಘಟಕಗಳ ಸಂಯುಕ್ತ ಕಾರ್ಯಾಚರಣೆಯಿಂದ ರಕ್ಷಿಸಲಾಯಿತು. ಚಾಲಕನನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಗರೀಬ್ ರಥ ಎಕ್ಸ್‌ಪ್ರೆಸ್ ಮತ್ತು ಪ್ರಯಾಣಿಕ ರೈಲು ಎರಡೂ ಯಾವುದೇ ಹಾನಿಗೊಳಗಾಗದೆ ಸುರಕ್ಷಿತವಾಗಿವೆ ಎಂದು ಎಸ್‌ಪಿ ವಿಜಯವರ್ಗಿಯ ದೃಢಪಡಿಸಿದ್ದಾರೆ. ಸಂಜೆ ತಡವಾಗಿ, ಹಾನಿಗೊಂಡಿಲ್ಲದ ಹಳಿಯಲ್ಲಿ ಸಂಚಾರವನ್ನು ಪುನಃ ಆರಂಭಿಸಲಾಗಿದ್ದು, ಹಾನಿಗೊಂಡ ಮಾರ್ಗದಲ್ಲಿ ದುರಸ್ತಿ ಕಾರ್ಯ ರಾತ್ರಿಯಿಡೀ ಮುಂದುವರಿದಿವೆ. ಪ್ರಾಥಮಿಕ ತನಿಖೆ ಪ್ರಕಾರ ಟ್ರಕ್ ಚಾಲಕ ಅತಿ ವೇಗದಿಂದ ನಿಯಂತ್ರಣ ಕಳೆದುಕೊಂಡಿರಬಹುದು ಅಥವಾ ಯಾಂತ್ರಿಕ ವೈಫಲ್ಯ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.































