ಮಹಾರಾಷ್ಟ: ಸಮೃದ್ಧಿ ಮಹಾಮಾರ್ಗ ಮೂರನೇ ಹಂತದ ಹೆದ್ದಾರಿ ಕಾಮಗಾರಿ ವೇಳೆ ಭಾರಿ ಅವಘಡ ಸಂಭವಿಸಿದೆ. ಥಾಣೆ ಸಮೀಪದ ಶಹಾಪುರ ತಾಲೂಕಿನ ಸರ್ಲಾಂಬೆಯಲ್ಲಿ ಸೇತುವೆ ಕಾಮಗಾರಿ ವೇಳೆ ಗರ್ಡರ್ ಯಂತ್ರ ಕುಸಿದು ಬಿದ್ದಿದೆ. ಇದರಿಂದ 15ರಿಂದ 20 ಮಂದಿ ಸಾವನ್ನಪ್ಪಿದ್ದಾರೆ.
ಸಮೃದ್ಧಿ ಹೆದ್ದಾರಿಯ ಮೂರನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ರಾತ್ರಿಯೂ ಸಮೃದ್ಧಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಈ ದುರ್ಘಟನೆ ನಡೆದಿದೆ. ಶಹಪುರ ಸರಳಂಬೆಯಲ್ಲಿ ಈ ಘಟನೆ ನಡೆದಿದೆ. ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಗರ್ಡರ್ ಯಂತ್ರ ಮತ್ತು ಸ್ಲ್ಯಾಬ್ ಸಂಪರ್ಕಿಸುವ ಕ್ರೇನ್ ನೂರಾರು ಅಡಿ ಎತ್ತರದಿಂದ ಕಾರ್ಮಿಕರ ಮೇಲೆ ಬಿದ್ದಿದೆ. ಶಹಪುರ ಉಪ ಜಿಲ್ಲಾ ಆಸ್ಪತ್ರೆಗೆ ಇದುವರೆಗೆ 15 ಮೃತದೇಹಗಳನ್ನು ತರಲಾಗಿದೆ. ಮೂರ್ನಾಲ್ಕು ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.