ಚೆಕ್ಪೋಸ್ಟ್ ವೊಂದರಲ್ಲಿ ಶುಕ್ರವಾರ ರಾತ್ರಿ ಅರಣ್ಯ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದ ಸಂದರ್ಭ ಕಾರೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣ ಕೊಡಗು ಜಿಲ್ಲೆಯ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಲಿಂಗಾಪುರ ಚೆಕ್ಪೋಸ್ಟ್ ನಲ್ಲಿ ಬೆಳಕಿಗೆ ಬಂದಿದೆ.
ಮೈಸೂರಿನಲ್ಲಿ ಪತಿಯೊಂದಿಗೆ ವಾಸವಾಗಿದ್ದ ಹರಿಯಾಣ ಮೂಲದ ನಾನ್ನಿದೇವಿ (47) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಮೂವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಂದಿನಂತೆ ಶುಕ್ರವಾರ ರಾತ್ರಿ ಲಿಂಗಾಪುರ ಚೆಕ್ಪೋಸ್ಟ್ ನಲ್ಲಿ ತಪಾಸಣೆಯಲ್ಲಿ ತೊಡಗಿದ್ದರು. ಈ ಸಂದರ್ಭ ಅದೇ ಮಾರ್ಗವಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ ಕಾರಿನಲ್ಲಿ ಮಹಿಳೆಯ ಮೃತದೇಹ ಇರುವುದು ಕಂಡು ಬಂದಿದೆ.
ತಕ್ಷಣ ಎಚ್ಚೆತುಕೊಂಡ ಅರಣ್ಯ ಇಲಾಖಾ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸಿದ್ದಾಪುರ ಪೊಲೀಸರು ಕಾರಿನಲ್ಲಿದ್ದ ಮೂವರು ವ್ಯಕ್ತಿಗಳನ್ನು ಹಾಗೂ ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದರು. ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
































