ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ದಸರಾ ರಜೆ ಭಾರೀ ಖುಷಿ ಕೊಡಲಿದೆ. ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, 2025ರ ದಸರಾ ರಜೆ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ಒಟ್ಟು 18 ದಿನಗಳು ಇರಲಿವೆ.
ದಸರಾ ಸುದೀರ್ಘ ರಜೆ ಮಕ್ಕಳು ಹಾಗೂ ಪೋಷಕರಲ್ಲಿ ಸಂತಸ ಹೆಚ್ಚಿಸಿದೆ. ದಸರಾ ರಜೆಯನ್ನು ಮಧ್ಯಂತರ ಪರೀಕ್ಷೆಗಳು ಮುಗಿದ ನಂತರ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ರಜೆಯ ನಡುವೆಯೂ ಒಂದು ಪ್ರಮುಖ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿದೆ.
‘ಅಕ್ಟೋಬರ್ 2 ರಂದು’ ರಜೆ ಇದ್ದರೂ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಎಲ್ಲ ಶಾಲಾ ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದೆ. ಅಂದೇ ಮೈಸೂರಿನಲ್ಲಿ ದಸರಾ ಜಂಬೂಸವಾರಿಯೂ ನಡೆಯಲಿದೆ. ಇದೇನೇ ಇರಲಿ, ಈ ವರ್ಷದ ದಸರಾ ರಜೆಯು ಮಕ್ಕಳಿಗೆ ಹಬ್ಬದ ಸಂಭ್ರಮದ ಜತೆಗೆ ಪರೀಕ್ಷೆಯ ಒತ್ತಡದಿಂದ ಹೊರಬಂದು ವಿಶ್ರಾಂತಿ ಪಡೆಯಲು ಒಂದು ಒಳ್ಳೆಯ ಅವಕಾಶವಾಗಿದೆ.
ಎಸ್ಸೆಸ್ಸೆಲ್ಸಿ ಸೇರಿದಂತೆ ಪ್ರಮುಖ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಧ ವರ್ಷದಲ್ಲಿ ನಡೆದ ವಿಷಯದ ಬಗ್ಗೆ ಅಧ್ಯಯನ ಮಾಡುವುದಕ್ಕೆ ಸಮಯಾವಕಾಶ ಸಿಗಲಿದೆ.