ನವದೆಹಲಿ : ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ರಾಷ್ಟ್ರ ರಾಜಧಾನಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದೆ. ದೆಹಲಿ, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಹಲವಾರು ಭಾಗಗಳಲ್ಲಿ ಇಂದು ಸಂಜೆ ಬಲವಾದ ಗಾಳಿ ಬೀಸಿದ ಧೂಳಿನ ಬಿರುಗಾಳಿ ಬೀಸಿತು. ಬಲವಾದ ಗಾಳಿಯು ವಿಮಾನ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ.
ಸಂಜೆ ಮೋಡ ಮುಸುಕಿದ ವಾತಾವರಣ ಕಂಡುಬಂದ ಬೆನ್ನಲ್ಲೇ ಬಿರುಗಾಳಿ ವೇಗವಾಗಿ ಬೀಸಿತು. ಧೂಳು ಮಿಶ್ರಿತ ಗಾಳಿಗೆ ಜನರು ಕಂಗಾಲಾದರು. ಎಕ್ಸ್‌ಪ್ರೆಸ್ ಹೈವೇಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ಹಲವೆಡೆ ಲಘು ಮಳೆಗೆ ಮರಗಳು ಧರೆಗುರುಳಿವೆ. ಬಿರುಗಾಳಿ ಹಿನ್ನೆಲೆ 15 ವಿಮಾನಗಳ ಮಾರ್ಗ ಬದಲಾವಣೆ ಆಗಿವೆ. ಹಲವು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.
ಬಿರುಗಾಳಿ ತುಂಬಾ ಹಾನಿ ಉಂಟುಮಾಡಬಹುದು. ಜನರು ಮನೆ ಒಳಗಡೆಯೇ ಇರಿ. ಹೊರಗಡೆ ಪ್ರಯಾಣ ಮಾಡದಿರಿ . ಮರಗಳ ಕೆಳಗೆ ಆಶ್ರಯ ಪಡೆಯಬೇಡಿ, ಕಾಂಕ್ರೀಟ್ ಮಹಡಿಗಳ ಮೇಲೆ ಮಲಗಬೇಡಿ ಮತ್ತು ಕಾಂಕ್ರೀಟ್ ಗೋಡೆಗಳ ಮೇಲೆ ಒರಗಬೇಡಿ. ವಿದ್ಯುತ್ ಉಪಕರಣಗಳನ್ನು ಅನ್‌ಪ್ಲಗ್ ಮಾಡಿ ಎಂದು ಹವಾಮಾನ ಕಚೇರಿ ಎಚ್ಚರಿಕೆ ನೀಡಿದೆ.